

ಕೇಶವಮೂರ್ತಿ ವಿ.ಬಿ. ಹಾವೇರಿ
ಮುಖ್ಯಮಂತ್ರಿಯವರ ತವರು ಜಿಲ್ಲೆ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ರಾಜಕೀಯ ಚಟುವಟಿಕೆ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಬ್ಯಾನರ್, ಕ್ಯಾಲೆಂಡರ್ ನಂತರ ಈಗ ಪೋಸ್ಟರ್ ರಾಜಕೀಯ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಆಕಾಂಕ್ಷಿಗಳು ಪೈಪೋಟಿಗೆ ಬಿದ್ದವರಂತೆ ನಗರದೆಲ್ಲೆಡೆ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದಾರೆ. ಹಲವರು ನಗರಸಭೆ ಅನುಮತಿ ಇಲ್ಲದೇ ಪೋಸ್ಟರ್ ಅಂಟಿಸುತ್ತಿದ್ದಾರೆ. ಇದರಿಂದ ನಗರದ ಅಂದ ಹದಗೆಡುತ್ತಿದೆ. 'ನಿಮ್ಮ ಮನೆ ಮಗನಿಗೆ ಆಶೀರ್ವದಿಸಿ', 'ಒಂದು ಅವಕಾಶ ನಿಮ್ಮ ಸೇವೆಗೆ', 'ಮನೆ ಮನೆಗೆ ಬೆಟಗೇರಿ ಭೇಟಿ', 'ನಿಮ್ಮ ಸೇವಾಕಾಂಕ್ಷಿ', ಹೀಗೆ ತರಹೇವಾರಿ ಶೀರ್ಷಿಕೆಯ ಪೋಸ್ಟರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ನಗರದ ಬಸ್ ನಿಲ್ದಾಣ, ಹೊಸಮನಿ ಸಿದ್ದಪ್ಪ ವೃತ್ತ, ರೈಲು ನಿಲ್ದಾಣ, ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಸುಭಾಷ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳು, ಜನನಿಬಿಡ ಪ್ರದೇಶಗಳಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದಾರೆ. ಗೋಡೆ, ಸ್ಕೈವಾಕ್, ವೃತ್ತಗಳಲ್ಲಿ ಆಕಾಂಕ್ಷಿಗಳ ಫೋಟೋ ಇರುವ ಪೋಸ್ಟರ್‌ಗಳೇ ರಾರಾಜಿಸುತ್ತಿವೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೊದ ಮೊದಲು ಹಬ್ಬ, ವಿಶೇಷ ಕಾರ್ಯಕ್ರಮಗಳು ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಆಗಮಿಸುವ ಸಂದರ್ಭದಲ್ಲಿ ಬ್ಯಾನರ್ ಅಳವಡಿಸುತ್ತಿದ್ದರು. ಅದರಲ್ಲಿ ತಾವು ಕ್ಷೇತ್ರದ ಈ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದರು. ನಂತರ ಜಿಪಂ ಮಾಜಿ ಅಧ್ಯಕ್ಷ, ಬಿಜೆಪಿಯ ಟಿಕೆಟ್ ಆಕಾಂಕ್ಷಿ ಪರಮೇಶ್ವರಪ್ಪ ಮೇಗಳಮನಿ ಸೇರಿದಂತೆ ಹಲವರು ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗೆ ಕ್ಯಾಲೆಂಡರ್ ಹಂಚಲು ಶುರು ಮಾಡಿದರು.
ಮುಂದುವರಿದ ಭಾಗವಾಗಿ ಇದೀಗ ಆಕಾಂಕ್ಷಿಗಳು ಪೋಸ್ಟರ್ ಅಂಟಿಸಲು ದುಂಬಾಲು ಬಿದ್ದಿದ್ದಾರೆ. ಒಬ್ಬರನ್ನು ನೋಡಿ ಮತ್ತೊಬ್ಬರು ಪೈಪೋಟಿಗೆ ಬಿದ್ದವರಂತೆ ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸುತ್ತಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಬಿಜೆಪಿಯ ಕೆ.ಬಿ.ಮಲ್ಲಿಕಾರ್ಜುನ, ವೆಂಕಟೇಶ ನಾರಾಯಣಿ, ಶ್ರೀಪಾದಸ್ವಾಮಿ ಬೆಟಗೇರಿ, ಸೇರಿದಂತೆ ಹಲವರು ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ.
ಆಕರ್ಷಕ ಪ್ರಣಾಳಿಕೆ
ಪಕ್ಷಗಳಿಗಿಂತ ಮೊದಲು ತಾವೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಟಿಕೆಟ್ ಆಕಾಂಕ್ಷಿಗಳು ತಮ್ಮದೇ ಆದ ಆಕರ್ಷಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ಕುಡಿಯುವ ನೀರು, ಉತ್ತಮ ರಸ್ತೆ, ಒಳಚರಂಡಿ, ಮಹಿಳೆಯರ ಸುರಕ್ಷತೆ, ಲಂಚಮುಕ್ತ, ಅರಣ್ಯೀಕರಣ, ಕೆರೆಗಳ ಅಭಿವೃದ್ಧಿ, ಆಟದ ಮೈದಾನ, ಉದ್ಯಾನವನ ಅಭಿವೃದ್ಧಿ ಸೇರಿದಂತೆ ಅನೇಕ ಭರವಸೆಗಳನ್ನು ಜನರ ಮುಂದಿಡುತ್ತಿದ್ದಾರೆ.
ನಗರದ ಅಂದಕ್ಕೆ ದಕ್ಕೆ
ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಅಂದಕ್ಕೆ ದಕ್ಕೆಯಾಗುತ್ತಿದೆ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಪರಿಸರದ ಮೇಲೆ ಪ್ರಹಾರ ಮಾಡುತ್ತಿದ್ದಾರೆ. ಇದಕ್ಕೆ ಅಂಕುಶ ಹಾಕಬೇಕಿದ್ದ ಹಾವೇರಿ ನಗರಸಭೆ ಕಣ್ಣಿದ್ದೂ ಕುರುಡಾದಂತೆ ವರ್ತಿಸುತ್ತಿದೆ. ಅನುಮತಿ ಇಲ್ಲದೇ ಬ್ಯಾನರ್, ಪೋಸ್ಟರ್ ಅಂಟಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪರಿಸರ ವಾದಿಗಳು ಆಗ್ರಹಿಸಿದ್ದಾರೆ.
ಕೋಟ್:
ನಗರಸಭೆ ಅನುಮತಿ ಪಡೆಯದೇ ಎಲ್ಲೆಂದರಲ್ಲಿ ಬ್ಯಾನರ್, ಪೋಸ್ಟರ್ ಅಂಟಿಸುವವರ ವಿರುದ್ಧ ನೋಟಿಸ್ ಕೊಡುತ್ತೇವೆ. ಅಂಟಿಸಿದವರೇ ತೆರವುಗೊಳಿಸುವಂತೆ ಸೂಚಿಸುತ್ತೇವೆ.
ಸಂಜೀವಕುಮಾರ ನೀರಲಗಿ, ಅಧ್ಯಕ್ಷ, ನಗರಸಭೆ