ಜಿಲ್ಲೆಯಾದ್ಯಂತ ಈದ್ ಮಿಲಾದ್ ಸಂಭ್ರಮ; ಪರಸ್ಪರ ಶುಭಾಶಯ ಕೋರಿದ ಮುಸ್ಲಿಮರು; ಮೆಕ್ಕಾ, ಮದೀನಾ ಪ್ರತಿಕೃತಿ ಮೆರವಣಿಗೆ

wwwwwww
Published on

ಹಾವೇರಿ: ಇಸ್ಲಾಂ ಧರ್ಮದ ಪ್ರವರ್ತಕ, ಶಾಂತಿಧೂತ ಹಜರತ್ ಮಹ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಸೋಮವಾರ ಸಂಭ್ರಮದಿಂದ ಆಚರಿಸಿದರು. ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಪ್ರಮುಖ ನಗರ, ಪಟ್ಟಣಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಪರಸ್ಪರ ಶುಭ ಕೋರಿದರು.
ನಗರದ ವಿವಿಧೆಡೆ ಬೆಳಗ್ಗೆಯಿಂದಲೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಹಾವೇರಿಯ ಹಜರತ್ ಮೆಹಬೂಬ್ ಸುಭಾನಿ ದರ್ಗಾದ ಸಮೀಪ ಖುರಾನ್ ಓದುವ ಮೂಲಕ ಈದ್ ಮಿಲಾದ್ ಹಬ್ಬದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಮಾನೆಗಾರ ಓಣಿ, ಮೈಲಾರ ಮಹಾದೇವ ವೃತ್ತ, ಗಾಂಧಿವೃತ್ತ, ಜೆ.ಪಿ. ವೃತ್ತ, ಗುರುಭವನ, ಜೆ.ಎಚ್. ಪಟೇಲ್ ವೃತ್ತ, ಖಬರ್‌ಸ್ತಾನ್, ದಾವಲ್‌ಮಲ್ಲಿಕ್ ದರ್ಗಾ, ಅಂಬೇಡ್ಕರ್ ವೃತ್ತ, ದ್ಯಾಮವ್ವನ ಪಾದಗಟ್ಟಿ, ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಮರಳಿ ಮೆಹಬೂಬ ಸುಭಾನಿ ದರ್ಗಾಕ್ಕೆ ಆಗಮಿಸಿತು.
ಬೆಳಗ್ಗೆಯಿಂದ ಸಂಜೆವರೆಗೆ ನಗರದಲ್ಲಿ ಮೆರವಣಿಗೆ ನಡೆಯಿತು. ಪುಷ್ಪಾರ್ಚನೆ ಮಾಡುತ್ತ ಮೆಕ್ಕಾ, ಮದೀನಾ ಪ್ರತಿಕೃತಿಗಳನ್ನು ಪೈಗಂಬರರ ಜೈಕಾರ, ಅವರ ಜೀವನ ಸಂದೇಶ ಘೋಷಣೆಗಳೊಂದಿಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಧರ್ಮಗುರುಗಳು ಉಪನ್ಯಾಸ ನೀಡಿದರು. ಮೆರವಣಿಗೆ ಸಂಚರಿಸುತ್ತಿದ್ದಾಗ ಕೆಲವರು ಕುಡಿಯುವ ನೀರು, ತಂಪು ಪಾನೀಯ, ಹಣ್ಣು-ಹಂಪಲು ಹಾಗೂ ಸಿಹಿ ತಿನಿಸುಗಳನ್ನು ವಿತರಿಸಿದರು.
ಮೆರವಣಿಗೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಭು ಬಿಷ್ಟನಗೌಡ್ರ, ಸೇರಿದಂತೆ ವಿವಿಧ ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಂಡು ಮುಸ್ಲಿಂಮರಿಗೆ ಶುಭಾಶಯ ಕೋರಿದರು.
ಹಾವೇರಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇರ್ಫಾನ್ ಖಾನ್ ಪಠಾಣ, ಜಮೀರ್ ಜಿಗರಿ, ಫೀರ್‌ಸಾಬ್ ಚೋಪದಾರ್, ಹಮರ್ ಕಲ್ಯಾಣ್, ಸಾದಿಕ್ ಮೇಲ್ಮುರಿ, ಅಜಮತ್ ಶೇಖ್, ಅನ್ವರ್ ಕಡೆಮನಿ, ಚಮನ್ ಮುಲ್ಲಾ, ಮುಜಫರ್ ಕೊಟ್ಟಿಗೇರಿ, ಬಾಬುಸಾಬ್ ಬಾಲೇಬಾಯಿ, ಸಾದಿಕ್ ಸವಣೂರ, ಅಮೀರ್‌ಜಾನ್ ಬೇಪಾರಿ, ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net