ಈಡಿಗರ ಸಂಘದ ಅಮೃತ ಮಹೋತ್ಸವ ನಾಳೆ

Published on

ಹಾವೇರಿ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಬೃಹತ್ ಜಾಗೃತಿ ಸಮಾವೇಶವನ್ನು ಡಿ.10ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸಂಘಟನಾ ಕಾರ್ಯದರ್ಶಿ ಮಹದೇವ ಈಳಗೇರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಸಂಘದ ಅಮೃತ ಮಹೋತ್ಸವ ಹಾಗೂ ಸಮಾಜದ ಎಲ್ಲ 26 ಪಂಗಡಗಳ ಬೃಹತ್ ಜಾಗೃತಿ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಮಠಾಧೀಶರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಮಧು ಬಂಗಾರಪ್ಪ, ಶಿವರಾಜ ತಂಗಡಗಿ ಸೇರಿದಂತೆ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸಮಾಜದ ಮುಖಂಡರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಮಾವೇಶದಲ್ಲಿ ಆರ್ಯ ಈಡಿಗರ ಸಮಾಜದ ನಿಗಮಕ್ಕೆ ವರ್ಷಕ್ಕೆ 500 ಕೋಟಿ ರೂ. ಹಣ ಮೀಸಲು ಈಡುವುದು, ಸಮಾಜದ ಜನರ ಪ್ರಮುಖ ಉದ್ಯೋಗವಾಗಿದ್ದ ಸೇಂದಿ ಇಳಿಸಲು ರಾಜ್ಯದಲ್ಲಿ ಪರವಾನಗಿ ನೀಡುವುದು, ಪ್ರತಿ ಜಿಲ್ಲೆಯಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸ್ಥಾಪನೆ, ಸಮಾಜದ ಯುವಕರಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಮಾವೇಶಕ್ಕೆ ಜಿಲ್ಲೆಯಿಂದ ಸಾವಿರಾರು ಜನ ಆಗಮಿಸಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2 ಲಕ್ಷಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಆಂಜನೇಯ ಈಳಗೇರ, ಹರೀಶ ಈಳಗೇರ, ಅಡಿವೇಶ ಈಳಗೇರ, ಅಜಯ ಈಳಗೇರ, ರಾಘು ಈಳಗೇರ, ಸುರೇಶ ಈಳಗೇರ, ಲಕ್ಷ್ಮವ್ವ ಈಳಗೇರ, ರಾಧಾ ಈಳಗೇರ, ಪೂಜಾರ ಈಳಗೇರ, ರೇಖಾ ಈಳಗೇರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net