ಈಡಿಗ ನಿಗಮಕ್ಕೆ 250 ಕೋಟಿ ರೂ. ಕೊಡಿ

Published on

ಹಾವೇರಿ: ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ವರ್ಷಕ್ಕೆ 250 ಕೋಟಿ ರೂ.ಯನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ಬಿ.ಎಚ್. ನಾಗರಾಜ ನಾಯಕ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮುದಾಯದ ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ ಅವರನ್ನು ಕಡೆಗಣಿಸಿರುವುದನ್ನು ಸಹಿಸುವುದಿಲ್ಲ. ಈ ಕೂಡಲೇ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಹಿಂದಿನ ಸರ್ಕಾರ ಆದೇಶಿಸಿದ್ದ ಕುಲಶಾಸ್ತ್ರ ಅಧ್ಯಯನವನ್ನು ಕೂಡಲೇ ಪ್ರಾರಂಭಿಸಬೇಕು. ಈಡಿಗ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
ಕುಲಕಸುಬು ಸೇಂದಿ ಹಾಗೂ ನೀರಾ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧದಲ್ಲಿ ಸ್ಥಾಪಿಸಬೇಕು. ಸಮಾಜದ ಮಕ್ಕಳಿಗಾಗಿ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್.ಬಂಗಾರಪ್ಪನವರ ಹೆಸರಿಡಬೇಕು. ಹೆಂಡದ ಮಾರಯ್ಯನವರ ಜಯಂತಿ ಆಚರಿಸಬೇಕು. ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ಹಿಂದಿನ ಸರ್ಕಾರ ನೀಡಿದ ಕಾನೂನು ಗೊಂದಲಗಳನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾಮಂಡಳದ ಜಿಲ್ಲಾಧ್ಯಕ್ಷ ಪರಶುರಾಮ ಈಳಗೇರ, ಜಿಲ್ಲಾ ಗೌರವ ಅಧ್ಯಕ್ಷ ಪರಶುರಾಮ ಈಳಗೇರ, ಮಂಜುನಾಥ ಈಳಗೇರ, ಮಲ್ಲಿಕಾರ್ಜುನ ಈಳಗೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net