ಹಾವೇರಿ: ಶ್ರೀ ಪ್ರಣವಾನಂದ ಸ್ವಾಮೀಜಿ ನಮ್ಮ ಸಮಾಜದ ಗುರುಗಳೇ ಅಲ್ಲ ಎಂದಿರುವ ರಾಜ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ್ರ ಹೇಳಿಕೆ ಖಂಡನೀಯ. ಈಡಿಗ ಸಮಾಜದ ಅಭಿವೃದ್ಧಿಗಾಗಿ ಶ್ರೀಗಳು ಶ್ರಮಿಸುತ್ತಿದ್ದು, ಅವರ ಏಳ್ಗೆ ಸಹಿಸಲಾಗದೇ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ಈಳಗೇರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರ ತಾಲೂಕು ಅರೆಮಲ್ಲಾಪುರದ ಶರಣ ಬಸವೇಶ್ವರ ಮಠದ ಮಠಾದೀಶ ಶ್ರೀ ಪ್ರಣವಾನಂದ ಸ್ವಾಮೀಜಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಅವರು ಜಾತಿ ಪ್ರಮಾಣ ಪತ್ರ ಸಲ್ಲಿಸಿದಾಗ ಅವರು ನಮ್ಮ ಜಾತಿಯವರು ಎಂಬುದು ನಮ್ಮ ಸಂಘಕ್ಕೆ ಗೊತ್ತಾಗಿತ್ತು. ಆಗ ನಾವೇ ಅವರನ್ನು ಬೆಂಬಲಿಸಿದ್ದೆವು. ಅಂದಿನಿಂದ ಅವರು ನಮ್ಮ ಸಂಘದ ಸಂಪರ್ಕಕ್ಕೆ ಬಂದರು ಎಂದರು.
ನಂತರ ಶ್ರೀಗಳು ಜಿಲ್ಲೆಯಲ್ಲಿ ಸಂಘಟನೆ ಮಾಡಿ ಸಮಾಜವನ್ನು ಒಗ್ಗೂಡಿಸಿದರು. ಅವರು ರಾಜ್ಯಾದ್ಯಂತ ಸಂಘಟನೆ ಮಾಡುವಂತೆ ನಮ್ಮ ಸಂಘವೇ ಪ್ರೋತ್ಸಾಹಿಸಿತು. ಪಾದಯಾತ್ರೆ ಸೇರಿದಂತೆ ಅನೇಕ ಹೋರಾಟಗಳನ್ನು ರೂಪಿಸಿದರು. ಹಿಂದಿನ ಸರ್ಕಾರ ಈಡಿಗ ನಿಗಮ ಮಂಡಳಿ ಸ್ಥಾಪಿಸುವಲ್ಲಿ ಶ್ರೀಗಳ ಪಾತ್ರ ಮುಖ್ಯವಾಗಿದೆ. ರಾಜಕೀಯ ಪ್ರೇರಿತವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಮಂಡಳದ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಈಳಗೇರ, ಗೌರವಾಧ್ಯಕ್ಷ ಮಾರುತೆಪ್ಪ ಈಳಗೇರ, ಜಿಲ್ಲಾ ಕಾರ್ಯದರ್ಶಿ ಮುತ್ತಣ್ಣ ಈಳಗೇರ, ಹಾವೇರಿ ತಾಲೂಕು ಅಧ್ಯಕ್ಷ ರಾಜು ಈಳಗೇರ, ಸವಣೂರ ಅಧ್ಯಕ್ಷ ಜಗದೀಶ ಈಳಗೇರ, ಮಲ್ಲಿಕಾರ್ಜುನ ಈಳಗೇರ, ರಮೇಶ ಈಳಗೇರ, ಇತರರಿದ್ದರು.
ಸಮಾಜಕ್ಕೆ ಮಧು ಬಂಗಾರಪ್ಪ ಕೊಡುಗೆ ಶೂನ್ಯ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ‘ಪ್ರಣವಾನಂದ ಸ್ವಾಮೀಜಿಯ ಹಿನ್ನೆಲೆ ಕುರಿತು ಗಮನಿಸಿ, ಅವರು ಎಲ್ಲಿಂದ ಬಂದಿದ್ದಾರೆ’ ಎಂದು ಹೇಳಿದ್ದಾರೆ. ಮಧು ಬಂಗಾರಪ್ಪಗೆ ಸಮಾಜದ ಬಗ್ಗೆ ಏನೂ ಗೊತ್ತಿಲ್ಲ. ಅವರು ಸಮಾಜಕ್ಕಾಗಿ ಸಂಘಟನೆ ಮಾಡಿದವರಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಈಡಿಗರ ಬಗ್ಗೆ ಮಾತನಾಡಿ ಓಟು ಪಡೆಯುತ್ತಾರೆ. ನಂತರ ಸಮಾಜವನ್ನು ಮರೆತು ಬಿಡುತ್ತಾರೆ. ಸಮಾಜದ ಕಟ್ಟಕಡೆಯ ಸ್ವಾಮೀಜಿ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಮಹಾಮಂಡಳದ ಜಿಲ್ಲಾ ಗೌರವಾಧ್ಯಕ್ಷ ಮಾರುತಿ ಈಳಗೇರ ಆರೋಪಿಸಿದರು.