

ಹಾವೇರಿ: ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥಿಸುವ ಮೂಲಕ ಆಚರಿಸಿದರು. ನಗರದ ದಾನಮ್ಮ ದೇವಿ ಗುಡಿ ಬಳಿಯ ಈದ್ಗಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ 11.15ರವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಳೆ ಇಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದು, ಈ ಬಾರಿ ಸಂಪದ್ಬರಿತವಾಗಿ ಮಳೆಯಾಗಲಿ, ಉತ್ತಮವಾದ ಫಸಲು ಬರಲಿ ಎಂದು ಪ್ರಾರ್ಥಿಸಿದರು. ಕಾನೂನು ಬಾಹಿರವಾಗಿ ಯಾರೂ ಏನೂ ಮಾಡುವಂತಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಎಲ್ಲ ವಧು- ವರರಿಗೆ ಶುಭವಾಗಲಿ ಎಂಬಿತ್ಯಾದಿ ವಿಷಯಗಳ ಕುರಿತು ಸಾಮೂಹಿಕವಾಗಿ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಾಮೂಹಿಕ ಪ್ರಾರ್ಥನೆಯಲ್ಲಿ 15 ಸಾವಿರಕ್ಕೂ ಅಧಿಕ ಮುಸ್ಲಿಮರು ಪಾಲ್ಗೊಂಡಿದ್ದರು. ಧರ್ಮ ಗುರುಗಳಾದ ಮೌಲಾಲಿ ಮುಲ್ಲಾ, ಅಹಮ್ಮದ್ ರಜಾ ಜಮಾದಾರ, ಹಾವೇರಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ, ಉಪಾಧ್ಯಕ್ಷರಾದ ಚಮನ್ ಷರೀಫ್ ಮುಲ್ಲಾ ಹಾಗೂ ಅನ್ವರ್ ಕಡೇಮನಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೇರಿ, ಖಜಾಂಚಿ ಗುಲಾಮ್ ಬಂಕಾಪುರ, ಸದಸ್ಯರಾದ ಜಮೀರ್ ಜಿಗರಿ, ಸಾದಿಕ್ ಸವಣೂರ, ಇಮಾಮಹುಸೇನ್ ಬಾಲಿಬಾಯಿ, ಮುಕ್ತಿಯಾರ್ ಗುಡಗೇರಿ, ಜಿಲಾನಿ ದೀಸೂರ, ದಾವುಸಾಬ ಮೂರಡಗಿ, ನಗರಸಭೆ ಸದಸ್ಯರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.