

ಹಾವೇರಿ: ಜಿಲ್ಲೆಯಾದ್ಯಂತ ಮುಸ್ಲಿಮರು ಶನಿವಾರ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಆಚರಣೆಯನ್ನು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಿದರು. ಜಿಲ್ಲೆಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಕುರಿ, ಮೇಕೆ ಕುರಬಾನಿ ಸಲ್ಲಿಸಿ, ಸಹಭೋಜನ ಸವಿದರು.
ಹಾವೇರಿ, ಗುತ್ತಲ, ರಾಣೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಬ್ಯಾಡಗಿ, ಹಾನಗಲ್ಲ, ಅಕ್ಕಿಆಲೂರ, ಶಿಗ್ಗಾಂವಿ, ಬಂಕಾಪುರ, ಸವಣೂರ, ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಕ್ರೀದ್ ಹಬ್ಬ ಆಚರಿಸಲಾಯಿತು.
ಹಾವೇರಿ ನಗರದ ಅಂಜುಮನ್ ಎ ಇಸ್ಲಾಂ ಸಮಿತಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಾಗೇಂದ್ರನಮಟ್ಟಿ, ಮೆಹಬೂಬ ಸುಬಾನಿ ದರ್ಗಾ, ಶಿವಾಜಿನಗರ, ವಿದ್ಯಾನಗರ, ಲಕಮಾಪೂರ, ಸುಭಾಷ್ ಸರ್ಕಲ್, ಶಿವಯೋಗಿಶ್ವರ ನಗರ, ಹೊಸನಗರ, ತಾಜ್ ನಗರ, ಮತ್ತಿತರ ಬಡಾವಣೆಗಳಿಂದ ಸಾವಿರಾರು ಮುಸ್ಲಿಮರು ಭಾಗವಹಿಸಿದ್ದರು. ಹೊಸಬಟ್ಟೆ ಧರಿಸಿಕೊಂಡು ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರರು ತಬ್ಬಿಕೊಂಡು ‘ಈದ್ ಮುಬಾರಕ್’ ಎಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಅಂಜುಮನ್ ಎ ಇಸ್ಲಾಂ ಸಮಿತಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ, ಉಪಾಧ್ಯಕ್ಷ ಚಮನ ಷರೀಫ್ ಮುಲ್ಲಾ, ಅನ್ವರ್ ಕಡೇಮನಿ, ಕಾರ್ಯದರ್ಶಿ ಸೈಯದ್ ಮುಜಫರ್ ಕೊಟ್ಟಿಗೇರಿ, ಜಮೀರ್‌ಅಹ್ಮದ್ ಜಿಗರಿ, ಇಸ್ಮಾಯಿಲ್‌ಸಾಬ ಲಬ್ಬೇರ, ಸಾದಿಕ್ ಸವಣೂರ, ಶಫಿಸಾಬ ಗೋಲಿಬಾರ, ಕಮರ್‌ಅಲಿ ಕಲ್ಯಾಣಿ, ಮೆಹಬೂಬ್‌ಅಲಿ ಅತ್ತಾರ, ಬಾಬುಲಾಲ್ ಬಾಲೇಬಾಯಿ, ಪೀರಸಾಬ ಚೋಪದಾರ್, ಬಾಬುಸಾಬ ಮೊಮಿನಗಾರ, ದಾದಾಪೀರ ಚೂಡಿಗಾರ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ನಜೀರ್ ನದಾಫ್, ಅಲ್ಲಾಭಕ್ಷ ತಿಮ್ಮಾಪೂರ, ಸುಭಾನಿ ಚೂಡಿಗಾರ, ಗುಲಾಂ ಬಂಕಾಪುರ, ಅಮೀರ್‌ಜಾನ್ ಬೇಪಾರಿ, ಗೌಸ್ ಹತ್ತಿಕಾಳ, ವಿವಿಧ ಮಸೀದಿಗಳ ಮೌಲಾನಾಗಳು, ಮೌಲ್ವಿಗಳು, ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.
ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ
ಹಾವೇರಿ: ನಗರದ ಈದ್ಗಾ ಮೈದಾನದಲ್ಲಿ ಧರ್ಮಗುರುಗಳಾದ ಮೌಲಾಲಿ ಮುಲ್ಲಾ, ದಾದಾಪೀರ ಮುಲ್ಲಾ ಹಾಗೂ ಮಣ್ಣಮಸೂತಿ ಮೌಲಾನಾ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಪ್ರವಾದಿ ಇಬ್ರಾಹಿಂ ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ಈ ದಿನವನ್ನು ತ್ಯಾಗ, ಬಲಿದಾನದ ಸಂಕೇತವಾಗಿ ಬಕ್ರೀದ್ ಎಂದು ಆಚರಿಸಲಾಗುತ್ತದೆ.
ಈ ವರ್ಷ ಮುಂಗಾರು ಆರಂಭಗೊಂಡಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ಅನ್ನದಾತ ಸುಖದಿಂದಿದ್ದರೇ ಎಲ್ಲರೂ ಚೆನ್ನಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸೋಣ. ಜತೆಗೆ ಜಿಲ್ಲೆಯ ಬಡಜನರು ಹಾಗೂ ಜನಸಮಾನ್ಯರಿಗೆ ಯಾವುದೇ ರೀತಿ ಸಂಕಷ್ಟಗಳು, ಕಷ್ಟ ಕಾರ್ಪಣ್ಯಗಳು ಬಾರದ ಹಾಗೆ, ಮಕ್ಕಳಾಗದವರಿಗೆ ಸಂತಾನ ಭಾಗ್ಯವನ್ನು ಅಲ್ಲಾಹ ದೇವರು ಕರುಣಿಸಲೆಂದು ಪ್ರಾರ್ಥಿಸಿದರು.