ಸರ್ಕಾರದ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ; ಡಿವೈಎಫ್‌ಐನಿಂದ ತಹಸೀಲ್ದಾರ್ ಮೂಲಕ ಮನವಿ

Oplus_131072
Oplus_131072
Published on

ಹಾವೇರಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಪದಾಧಿಕಾರಿಗಳು ಒತ್ತಾಯಿಸಿದರು.

ನಗರದ ತಹಸೀಲ್ದಾರ್ ಶರಣಮ್ಮ ಕೆ. ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಹುದ್ದೆಗಳ ಭರ್ತಿಗೆ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೂ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಇದೇ ಕಾರಣಕ್ಕೆ ಜನ ಬಿಜೆಪಿಗೆ ಪಾಠ ಕಲಿಸಿ, ಕಾಂಗ್ರೆಸ್ ಸರ್ಕಾರ ತಂದಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರವೂ ಯುವಜನತೆಯನ್ನು ವಂಚಿಸುವತ್ತ ಸಾಗಿದೆ. ಇದಕ್ಕೆ ಯುವಜನತೆ ತಕ್ಕ ಪಾಠ ಕಲಿಸುವ ಕಾಲ ಸನಿಹವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಸಾಕ್ಷರತಾ ಇಲಾಖೆಗಳಲ್ಲಿ 70,727 ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,227 ಹುದ್ದೆಗಳು, ಆರೋಗ್ಯ ಇಲಾಖೆಯಲ್ಲಿ 37,069 ಹುದ್ದೆಗಳು, ಒಳಾಡಳಿತದಲ್ಲಿ (ಗೃಹ ಇಲಾಖೆ) 26,128 ಹುದ್ದೆಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ 8,000 ಹುದ್ದೆಗಳು ಸೇರಿದಂತೆ ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಸದಸ್ಯರು ಹೇಳಿದರು.

ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸಬಹುದು ಎಂದು ಯುವಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಾವಿರಾರು ಖರ್ಚು ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುತ್ತಿದ್ದಾರೆ. ಊಟ, ನಿದ್ದೆ ಬಿಟ್ಟು ಓದುತ್ತಿದ್ದಾರೆ. ಮಕ್ಕಳನ್ನು ಓದಿಸಲು ಪಾಲಕರೂ ಕಷ್ಟಪಡುತ್ತಿದ್ದಾರೆ. ಅಭ್ಯರ್ಥಿಗಳ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡಬಾರದು. ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಡಿವೈಎಫ್‌ಐ ಪ್ರಮುಖರಾದ ಬಸವರಾಜ ಪೂಜಾರ, ಪರಿಮಳಾ ಜೈನ್, ಫಕ್ಕೀರೇಶ ಮೇಗಳಮನಿ, ಕೆಎ.ಚ್.ಮುಂದಲಮನಿ, ಪರಮೇಶ ಎಂ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net