ಹಾವೇರಿ: ಆಪರೇಷನ್ ಸಿಂದೂರ ಘೋಷಣೆಯಡಿ ಭಯೋತ್ಪಾದನೆಯ ವಿರುದ್ಧ ಸದೃಢ ನಿಲುವು ತೆಗೆದುಕೊಂಡು ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿಗೈದ ಭಾರತೀಯ ಸೇನೆಯ ಕಾರ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯ ಸಮಿತಿ ಸ್ವಾಗತಿಸಿದೆ.
ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದದ್ದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ. ಈ ಘೋರ ಕೃತ್ಯದ ನಂತರ ದೇಶದ ಜನತೆ ಭಯೋತ್ಪಾದನೆಯ ವಿರುದ್ಧ ಬಲವಾಗಿ ಪ್ರತಿರೋಧಿಸಿತು. ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷವು ಸರ್ಕಾರದ ಕ್ರಮಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದವು. ಇದು ಭಯೋತ್ಪಾದನೆಯ ವಿರುದ್ಧ ದೇಶದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ.
ಮಂಗಳವಾರ ತಡರಾತ್ರಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯೊಳಗಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ಮತ್ತು ಅನುಕರಣೀಯ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತು. ಈ ಕಾರ್ಯಾಚರಣೆಯು ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದಕ್ಷತೆಗೆ ಸಾಕ್ಷಿಯಾಗಿದೆ. ಅವರ ಶೌರ್ಯ ಮತ್ತು ಅಚಲ ಬದ್ಧತೆಯು ರಾಷ್ಟ್ರದ ಹೆಮ್ಮೆಯಾಗಿದೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.