ಇಂಡಿಯಾ ಒಕ್ಕೂಟಕ್ಕೆ ಡಿವೈಎಫ್‌ಐ, ಎಸ್‌ಎಫ್‌ಐ ಬೆಂಬಲ

Published on

ಹಾವೇರಿ: 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಡಿವೈಎಫ್‌ಐ, ಎಸ್‌ಎಫ್‌ಐ ಬೆಂಬಲ ಸೂಚಿಸಿದ್ದು, ಈ ಚುನಾವಣೆಯಲ್ಲಿ ಭ್ರಷ್ಠ ಹಾಗೂ ವಿದ್ಯಾರ್ಥಿ, ಯುವಜನರ ವಿರೋಧಿ ಬಿಜೆಪಿಯನ್ನು ಸೋಲಿಸಿ, ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವು ಕಳೆದ ಎರಡು ಅವಧಿಯಲ್ಲಿ ಭಾರತ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿ ಹಿಂದಕ್ಕೆ ಹೋಗಿದೆ. ಕಾರ್ಪೊರೇಟ್ ಶ್ರೀಮಂತರ ಪರವಾದ ಆರ್ಥಿಕತೆ ಮತ್ತು ಮತೀಯ ದ್ವೇಷದ ರಾಜಕಾರಣವು ದೇಶದ ಭವಿಷ್ಯವನ್ನೇ ಹಾಳು ಮಾಡಿದೆ. ರೈತ, ಕಾರ್ಮಿಕ ವರ್ಗದ ಬದುಕು ಶೋಚನೀಯ ಹಂತಕ್ಕೆ ತಲುಪಿದ್ದು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ ಎಂದರು.
ಕೇವಲ ಮತೀಯ ಉನ್ಮಾದ ಸೃಷ್ಟಿಸಿ, ಪ್ರಶ್ನಿಸುವ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕುವ, ದೇಶದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಫ್ಯಾಸಿಸ್ಟ್ ಮಾದರಿಯ ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸಿದ ಜನವಿರೋಧಿ ಬಿಜೆಪಿ ಪಕ್ಷವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.
ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಮಾತನಾಡಿ, ರಾಜ್ಯದಿಂದ ಆಯ್ಕೆಯಾದ ಸಂಸದರು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಯುವಜನರ ಉದ್ಯೋಗ ಒದಗಿಸುವ ಯಾವುದೇ ಕೆಲಸ ಮಾಡಲಿಲ್ಲ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಇಂಡಿಯಾ ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದುರುಗಪ್ಪ ಯಮ್ಮಿಯವರ, ಪರಶುರಾಮ ಕೊಪ್ಪಳದರ, ಪ್ರವೀಣ ಮರಾಠಿ, ಮಾರುತಿ ತಳವಾರ, ಭೀಮನಗೌಡ ಭರಮಗೌಡ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net