

ಹಾವೇರಿ: ಆಲದಕಟ್ಟಿ ಪಟಾಕಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಹಾಗೂ ತಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕನಿಷ್ಠ ತಲಾ 25 ಲಕ್ಷ ರೂ. ಪರಿಹಾರ ಹೆಚ್ಚಿಸುವಂತೆ ಒತ್ತಾಯಿಸಿದರು. ಅವಘಡದ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಗ್ನಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸಲು ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಬೇಕಿರುವ ಅತ್ಯಗತ್ಯ ಉಪಕರಣಗಳು, ಸಾಮಾಗ್ರಿಗಳನ್ನು ಇಡಬೇಕು. ಅಲ್ಲದೇ ಜನವಸತಿ ಪ್ರದೇಶದಲ್ಲಿ ಪಟಾಕಿ ದಾಸ್ತಾನು ಇಟ್ಟುಕೊಳ್ಳಲು ಮತ್ತು ಮಾರಾಟ ಮಾಡಲು ಅಧಿಕಾರಿಗಳು ಪರವಾನಗಿ ಕೊಟ್ಟಿರುವುದು ಸರಿಯಲ್ಲ. ಘಟನೆ ಸಂಭವಿಸಿದ ಮೇಲೆ ಅಧಿಕಾರಿಗಳು ಎಚ್ಚೆತ್ತಿರುವುದು ದುರಂತ. ಜಿಲ್ಲಾಡಳಿತ ಮೊದಲೇ ಸರಿಯಾದ ಕ್ರಮಗಳನ್ನು ಕೈಗೊಳ್ಳಕಬೇಕಿತ್ತು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಖಲಂದರ್ ಅಲ್ಲಿಗೌಡ್ರ, ವಿವೇಕ ಫನಸೆ, ಅಭಿಷೇಕ ಗುದಗಿ, ಚಂದ್ರು ಕೆ., ರವಿ ನಾಗಮ್ಮನವರ, ದಿಳ್ಳೆಪ್ಪ ಗೋಣೆಪ್ಪನವರ, ಸುಭಾಷ ನದಾಫ್, ಷಣ್ಮುಕ ನಡುವಿನಮನಿ, ಮನೋಜ ಎಂ.ಜಿ., ಫಯಾಜ್ ಮಾರನಬೀಡ, ಇತರರಿದ್ದರು.