ಅಂಜಲಿ ಹಂತಕನಿಗೆ ಕಠಿಣ ಶಿಕ್ಷೆ ವಿಧಿಸಿ; ಡಿವೈಎಫ್‌ಐ

Published on

ಹಾವೇರಿ: ಪ್ರೀತಿ ನಿರಾಕರಣೆಯ ನೆಪದಲ್ಲಿ ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಹತ್ಯೆಗೈದ ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕೊಲೆ ಆರೋಪಿ ಗಿರೀಶ ಸಾವಂತನನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ.
ನೇಹಾ ಕೊಲೆ ದುರ್ಘಟನೆಯ ಕರಾಳ ನೆನಪು ಇನ್ನೂ ಹಸಿಯಾಗಿರುವಾಗಲೇ ಅದೇ ನೆಲದಲ್ಲಿ ಮತ್ತೊಬ್ಬ ಯುವತಿಯ ಹತ್ಯೆ ನಡೆದಿರುವುದು ಅಘಾತಕಾರಿ. ಈ ಘಟನೆಗಳು ಯುವತಿಯರು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಮರೀಚಿಕೆಯಾಗುತ್ತಿದೆ ಎಂಬುದನ್ನು ತೆರೆದಿಟ್ಟಿವೆ.
ರಾಜ್ಯದಲ್ಲಿ ದಿನನಿತ್ಯ ಚಿಕ್ಕ ಹೆಣ್ಣು ಮಗುವಿನಿಂದ ವಯೋವೃದ್ಧ ಮಹಿಳೆಯರವರೆಗೂ ಒಂದಿಲ್ಲೊಂದು ರೀತಿಯ ಹಿಂಸೆ ದೌರ್ಜನ್ಯ ಘಟನೆಗಳು, ಕೊಲೆಗಳು ಅವ್ಯಾಹತವಾಗಿ, ಅನಿಯಂತ್ರಿತವಾಗಿ ನಡೆಯುತ್ತಿವೆ. ದೌರ್ಜನ್ಯ ಎಸಗುವವರಿಗೆ ಕಾನೂನಿನ ಭಯವೇ ಇಲ್ಲವೇನು ಎಂಬಂತಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳನ್ನು ದೀರ್ಘ ಕಾಲ ನಡೆಸದೇ ಶೀಘ್ರವಾಗಿ ಇತ್ಯರ್ಥಪಡಿಸಲು ಈ ಕೇಸ್‌ಗಳನ್ನು ತ್ವರಿತ ನ್ಯಾಯಾಲಯಕ್ಕೆ ನೀಡಬೇಕು. ಆ ಮೂಲಕ ದುರುಳರಿಗೆ ಶಿಕ್ಷೆಯನ್ನು ಮತ್ತು ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net