

ಹಾವೇರಿ: ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಈ ತೀರ್ಪುನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ವತಿಯಿಂದ ನಗರದಲ್ಲಿ ಗುರುವಾರ ತಮಟೆ ಚಳವಳಿ ನಡೆಸಲಾಯಿತು.
ಸುಪ್ರೀಂಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಲ್ಲದೇ ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಈ ಹಿಂದೆ ಈ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದವು. ಈಗ ಸಿಜೆಐ ಡಿ.ವೈ.ಚಂದ್ರಚೂಡ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ವಿಚಾರದಲ್ಲಿದ್ದ ಗೊಂದಲವನ್ನು ಪರಿಹರಿಸಿದೆ.
ಒಳ ಮೀಸಲಾತಿ ನೀಡಿಕೆಯು ಸಂವಿಧಾನ ಕಲ್ಪಿಸಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ. ವಾಸ್ತವಿಕವಾಗಿ ಸಮಾನತೆಯನ್ನು ಹೆಚ್ಚಿಸಲು ಅಗತ್ಯವಾಗಿದೆ. ಈ ಜಾತಿಗಳ ಒಳಗೆ ಇರುವ ಕೆಲವು ಉಪಜಾತಿಗಳಿಗೆ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂದು ಕೋರ್ಟ್ ಹೇಳಿದೆ.
ಚುನಾವಣೆ ಬಂದಾಗ ಮಾತ್ರ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ನಮಗೆ ಮೋಸ ಮಾಡುತ್ತಿವೆ. ಹೀಗಾಗಿ, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಆದಷ್ಟು ಬೇಗ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ, ಸುಮಂಗಲ ರಾರಾವಿ, ಬಿ.ಆರ್.ಪುಟ್ಟಣನವರ, ನಾಗರಾಜ ಶಿಡ್ಲಣ್ಣನವರ, ಆನಂದ ಮರಡಪ್ಪನವರ, ಮಾಲತೇಶ ಬಿಲ್ಲಳ್ಳಿ, ಬಸವರಾಜ ಎಲಬಿನಗೊಂಡ, ವಿಠ್ಠಲ ಡಾಂಗೆ, ಶಿವಣ್ಣ ಕನವಳ್ಳಿ, ಶೇಕಪ್ಪ ಹರಿಜನ, ಗಂಗಾಧರ ಭೋಗೇರ, ಫಕ್ಕಿರೇಶ ಹರಿಜನ, ರಮೇಶ ಮಾದಾಪೂರ, ನಾಗರಾಜ ಕರೆಮ್ಮನವರ, ಜಗದೀಶ ಹುಣಸಿಮರದ, ಫಕ್ಕಿರೇಶ ಮುದಿಯಣ್ಣನವರ, ರಮೇಶ ಜಾಲಿಹಾಳ, ಫಕ್ಕಿರೇಶ ಚೌಡಮ್ಮನವರ, ಅಣ್ಣಪ್ಪ ಸಂಜೀವಣ್ಣನವರ, ಮುತ್ತಪ್ಪ ಹರಿಜನ, ರಾಜು ಮುದುಕಣ್ಣನವರ, ಪ್ರವೀಣ ಗುಡ್ಡದಮಾದಾಪುರ, ಪ್ರಶಾಂತ ತಿರಕಪ್ಪನವರ, ನಾಗರಾಜ ಹರಿಜನ, ಇತರರಿದ್ದರು.