ದಲಿತ ಚಳವಳಿಯ ಸಂಭ್ರಮೋತ್ಸವ ಆ.7ರಂದು

5 HVR 4
Published on

ಹಾವೇರಿ: ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆ.7ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ದಲಿತ ಚಳವಳಿಯ 50 ವರ್ಷಗಳ ಸಂಭ್ರಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಬಿ.ಕೃಷ್ಣಪ್ಪನವರು 1974ರಲ್ಲಿ ದಲಿತ ಚಳವಳಿ ಸ್ಥಾಪಿಸುವ ಮೂಲಕ ಶೋಷಣೆಯ ವಿರುದ್ಧದ ಹೋರಾಟಕ್ಕೆ ದಾರಿದೀಪವಾದರು. ಈ ವೇದಿಕೆ ಮೂಲಕ ತಳಸಮುದಾಯದ ಜನರು ಬೀದಿಗೆ ಇಳಿದು ಹೋರಾಟ ಮಾಡುವ ಮೂಲಕ ಬಹಿರಂಗವಾಗಿ ಪ್ರತಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಈ ಮೂಲಕ ದಲಿತರಲ್ಲಿ ಜಾಗೃತಿ ಮೂಡಿಸಿದರು. ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಹೊರಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಹಕ್ಕೋತ್ತಾಯಗಳನ್ನು ಮುಂದಿಟ್ಟು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ನೀಡಿರುವ ವರದಿಯನ್ನು ಅಂಗೀಕಾರ ಮಾಡಿರುವ ರಾಜ್ಯ ಸರ್ಕಾರ ಆಂಧ್ರ ಮತ್ತು ತಮಿಳುನಾಡು ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು. 2023-24 ಹಾಗೂ 2024-25ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿಗೆ ಮೀಸಲಿರಿಸಿರುವ ಹಣದಲ್ಲಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾದ ಒಟ್ಟು 25 ಸಾವಿರ ಕೋಟಿ ರೂ. ವಾಪಾಸ್ ನೀಡಬೇಕು. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡಲಾಗುತ್ತಿರುವ ಪ್ರೋತ್ಸಾಹಧನಕ್ಕೆ ವಿಧಿಸಿರುವ ಆದಾಯ ಮತ್ತು ಅಂಕಗಳ ಮಿತಿಯನ್ನು ರದ್ದು ಪಡಿಸಬೇಕು. ಕರ್ನಾಟಕ ರಾಜ್ಯ ಅಲೆಮಾರಿ ಆಯೋಗ ರಚಿಸಬೇಕು. ಸಾಮಾಜಿಕ ಶೈಕ್ಷಣಿಕ ಹಾಗೂ ಜಾತಿವಾರು ಸಮೀಕ್ಷೆ ನಡೆಸಿರುವ ಕಾಂತರಾಜ ಆಯೋಗದ ವರದಿಯನ್ನು ಅಂಗೀಕರಿಸಿ ಅನುಷ್ಠಾನಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನ ಆಗಮಿಸಲಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸುಮಂಗಲಾ ರಾರಾವಿ, ನಾಗರಾಜ ಕುಳೇನೂರ, ಆನಂದ ಮುರಡಪ್ಪನವರ, ರಮೇಶ ಮಾದಾಪುರ, ಪ್ರಕಾಶ ಮರಡೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net