ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೆ ಜೀವಿಸಿ; ಆತ್ಮವಿಶ್ವಾಸದಿಂದ ಧೈರ್ಯವಾಗಿ ಬದುಕಿ; ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯಲ್ಲಿ ಡಾ.ಹಾವನೂರ ಸಲಹೆ

Published on

ಹಾವೇರಿ: ಜೀವನದಲ್ಲಿ ಕಷ್ಟ-ಸುಖ, ಸೋಲು-ಗೆಲವು ಸಾಮಾನ್ಯ. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೆ, ಎಲ್ಲವನ್ನು ಸಮನಾಗಿ ಸ್ವೀಕರಿಸಿ ಮುನ್ನಡೆಯಬೇಕು. ಆತ್ಮವಿಶ್ವಾಸದಿಂದ ಬದಕಲು ಕಲಿಯಬೇಕು. ಆಗ ಮಾತ್ರ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ಸಲಹೆ ನೀಡಿದರು.

ನಗರದ ಶ್ರೀ ಶಿವಲಿಂಗೇಶ್ವರ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಧೈರ್ಯ ಕಳೆದುಕೊಳ್ಳಲು ಹಲವಾರು ಕಾರಣಗಳಿವೆ. ಅವೆಲ್ಲವನ್ನು ಮೆಟ್ಟಿನಿಂತು, ಆತ್ಮವಿಶ್ವಾಸದಿಂದ ಬದಕಲು ಕಲಿಯಬೇಕು. ಪಾಲಕರು ಮತ್ತು ಮಕ್ಕಳ ನಡುವೆ ಉತ್ತಮ ಬಾಂಧವ್ಯ ಇರಬೇಕು. ಪಾಲಕರು ತಮ್ಮ ಮಕ್ಕಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಮಕ್ಕಳ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಿ, ಮಕ್ಕಳನ್ನು ಶಾಲೆಗಳಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಅಳೆಯಬೇಡಿ. ಹೆಚ್ಚು ಅಕಗಳನ್ನು ಪಡೆಯುವಂತೆ ಒತ್ತಡ ಹೇರಿ ಮಕ್ಕಳ ಮನಸ್ಸಿನಲ್ಲಿ ಆತಂಕ ಮೂಡಿಸಬೇಡಿ. ಅವರಿಗೆ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ವೈದ್ಯೆ ಡಾ.ಶೃತಿ ಎ. ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ ಆತ್ಮಹತ್ಯೆ ತಡೆಗಟ್ಟುವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆತ್ಮಹತ್ಯೆ ತಡೆಗಟ್ಟುವ ಕುರಿತು ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ.ಸರಿತಾ, ತಾಲೂಕು ಆರೋಗ್ಯಧಿಕಾರಿ ಡಾ.ಪ್ರಭಾಕರ ಕುಂದೂರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ ಕರಮುಡಿ, ಪ್ರಾಚಾರ್ಯ ರವಿ.ಸಿ.ವಿ. ಹಾಗೂ ಇತರರು ಉಪಸ್ಥಿತರಿದ್ದರು.

ಮಾನಸಿಕವಾಗಿ ಕೊರಗದಿರಿ..

ತಮ್ಮ ನೋವುಗಳನ್ನು ಹತ್ತಿರದ ವ್ಯಕ್ತಿಗಳಲ್ಲಿ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬೇಕು. ಕಷ್ಟಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾನಸಿಕವಾಗಿ ಕೊರಗಬಾರದು. ನಮ್ಮ ಸುತ್ತಮುತ್ತ ಯಾರಾದರೂ ಮಾನಸಿಕವಾಗಿ ಬಳಲುತ್ತಿದ್ದರೆ, ಅವರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net