ನಶಾಮುಕ್ತ ಭಾರತದ ಕನಸಿಗೆ ಕೈಜೋಡಿಸಿ; ಯುವಜನತೆ ದುಶ್ಚಟಗಳಿಗೆ ದಾಸರಾಗದಿರಿ; ನ್ಯಾಯಾಧೀಶೆ ಶೈಲಜಾ ಎಚ್.ವಿ. ಸಲಹೆ

30 HVR 6
Published on

ಹಾವೇರಿ: ಯುವ ಸಮೂಹ ಮಾದಕ ವಸ್ತುಗಳ ದುಶ್ಚಟಗಳಿಗೆ ದಾಸರಾಗದೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಶಾಮುಕ್ತ ಭಾರತದ ಕನಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶೈಲಜಾ ಎಚ್.ವಿ. ಹೇಳಿದರು.

ನಗರದ ಹೊಸಮಠದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ಪಾಕ್ಷಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಶಾಮುಕ್ತ ಭಾರತ ಒಬ್ಬರಿಂದ ಸಾಧ್ಯವಿಲ್ಲ, ವಿವಿಧ ಇಲಾಖೆಗಳು ಹಾಗೂ ಸಮಾಜದ ಸಹಭಾಗಿತ್ವ ಅಗತ್ಯವಾಗಿದೆ. ನಮ್ಮ ನಮ್ಮ ಕುಟುಂಬದಲ್ಲಿ ಇರುವ ಮಾದಕ ವ್ಯಸನಿಗಳಿಗೆ ನಶಾಮುಕ್ತಿ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಕೊಡಿಸುವ ಮೂಲಕ ನಶಾಮುಕ್ತ ಭಾರತಕ್ಕೆ ಎಲ್ಲರೂ ಮುಂದಾಗಬೇಕು ಎಂದರು.

ಮಾದಕ ವಸ್ತುಗಳ ಸೇವೆನೆಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಮನುಷ್ಯ ತನ್ನ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ಅನೇಕ ಅಪರಾಧಗಳಲ್ಲಿ ಭಾಗಿಯಾಗುತ್ತಾನೆ. ಹಾಗಾಗಿ, ಮಾದಕ ವಸ್ತುಗಳಿಂದ ದೂರವಿರಬೇಕು. ನಿಮ್ಮ ಸುತ್ತಮುತ್ತ ಅನಧಿಕೃತವಾಗಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಣೆ ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಒಟ್ಟಾರೆ ಹಾವೇರಿ ಜಿಲ್ಲೆ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಅಬಕಾರಿ ಇನ್ಸಪೆಕ್ಟರ್ ಸಿದ್ದಪ್ಪ ಮೇಟಿ ಮಾತನಾಡಿ, ಪಾಕ್ತಿಸ್ತಾನ, ಅಪಘಾನಿಸ್ತಾನ ಹಾಗೂ ಇರಾನ್ ದೇಶಗಳಲ್ಲಿ ಗಾಂಜಾ ಹಾಗೂ ಹೆರಾಯಿನ್ ನಂತಹ ಮಾದಕ ವಸ್ತುಗಳನ್ನು ಹೆಚ್ಚು ಉತ್ಪಾದಿಸುತ್ತಾರೆ. ಯುವ ಸಮೂಹವನ್ನು ಗರಿಯಾಗಿಟ್ಟುಕೊಂಡು ದೇಶದ ಗಡಿ ಭಾಗದ ರಾಜ್ಯಗಳಿಗೆ ಅಕ್ರಮವಾಗಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಯಾವುದೇ ಒಂದು ದೇಶದ ಯುವಶಕ್ತಿಯನ್ನು ಹಾಳು ಮಾಡಲು ಮಾದಕ ವಸ್ತುಗಳ ಬಳಕೆ ಒಂದೇ ಸಾಕು. ಯುವ ಸಮೂಹ ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗುವುದರಿಂದ ದೇಶದ ಆರ್ಥಿಕ ಬೆಳವಣಿಗೆ ಕುಂಟಿತವಾಗುತ್ತದೆ. ಹಾಗಾಗಿ, ಯುವಕರು ಜಾಗ್ರತೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ ಮಾತನಾಡಿದರು. ಮನೋವೈದ್ಯ ಡಾ.ವಿಜಯಕುಮಾರ ಬಿ. ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಮಾನಸಿಕ ರೋಗದ ಲಕ್ಷಣಗಳ ಕುರಿತು ಉಪನ್ಯಾಸ ನೀಡಿದರು. ಪ್ರಾಚಾರ್ಯ ಮಂಜುನಾಥ ವಡ್ಡರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚನಬಸಯ್ಯ ವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ ಲಮಾಣಿ, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಡಾ.ಸಂತೋಷ ದಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ, ಇತರರು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿ ವಾಣಿ ಚನ್ನವೀರಪ್ಪನವರ ಸ್ವಾಗತಿಸಿದರು. ಸುಪರ್ಣಾ ಯಡಹಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net