ಹಾವೇರಿ: ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತಮಿಳುನಾಡು ಮಾದರಿಯಲ್ಲಿ ಉಚಿತವಾಗಿ ಔಷಧ ಪೂರೈಕೆ ಮಾಡಬೇಕು. ನಂತರ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಮಾಡಬೇಕು ಎಂದು ಡ್ರಗ್ ಆ್ಯಕ್ಷನ್ ಪೋರಂನ ಅಧ್ಯಕ್ಷ ಡಾ.ಗೋಪಾಲ ದಾಬಡೆ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಂದು ಕಡೆ ಉಚಿತ ಔಷಧ ನೀಡುವ ಘೋಷಣೆ ಮಾಡಿದರೂ ಇದು ಪಾಲನೆಯಾಗುತ್ತಿಲ್ಲ. 2003ರಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಸ್ಥಾಪನೆ ಮಾಡಲಾಗಿದೆ. ಆದರೆ ಅದರ ನೈಜ ಉದ್ದೇಶ ಈಡೇರಿಲ್ಲ. ಇಂದಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ವಿತರಣೆ ಕೇವಲ ಘೊಷಣೆಯಾಗಿದೆ. ಕೆಲವೇ ಔಷಧಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ಬಡ ರೋಗಿಗಳು ನರಕಯಾತನೆ ಅನುಭವಿಸುವಂತಾಗಿದೆ ಎಂದು ದೂರಿದರು.
ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮ ತಮಿಳುನಾಡಿನಲ್ಲಿ ಉಚಿತವಾಗಿ ಔಷಧ ಪೂರೈಸುತ್ತಿದೆ. ಅದೇ ರೀತಿ ರಾಜಸ್ಥಾನ, ಕೇರಳದಲ್ಲೂ ಸೇವೆ ಸಿಗುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ(ಕೆಎಸ್‌ಎಂಎಸ್‌ಸಿಎಲ್)ದಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಪೂರೈಸುವ ಕುರಿತು ಸರ್ಕಾರ ಆದೇಶಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಡ್ರಗ್ ಆ್ಯಕ್ಷನ್ ಪೋರಂನ ಕಾರ್ಯದರ್ಶಿ ಡಾ.ಎಸ್.ಎಲ್ ಪವಾರ, ಖಜಾಂಚಿ ಅಮರನಾಥ ಭೂತೆ, ಸಂಯೋಜಕ ಕರಿಬಸಪ್ಪ ಇದ್ದರು.
ರಾಜ್ಯದಲ್ಲಿ ಡ್ರಗ್ ಮಾಫಿಯಾ ಬಲೆ
ರಾಜ್ಯಾದ್ಯಂತ ಡ್ರಗ್ ಆ್ಯಕ್ಷನ್ ಫೋರಂ, ಸಾರ್ವತ್ರಿಕ ಆಂದೋಲನ ಮತ್ತು ನಾಗರೀಕ ಹಿತರಕ್ಷಣಾ ವೇದಿಕೆ ಜಂಟಿಯಾಗಿ 2023ರಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಜತೆ ಚರ್ಚೆ ನಡೆಸಿದ್ದೆವು. ಉಚಿತ ಔಷಧ ಪೂರೈಕೆಗೆ ಸಚಿವರು ಒಪ್ಪಿಗೆ ಸೂಚಿಸಿದ್ದರು. ಆದರೆ ಮೆಡಿಕಲ್ ಮಾಫಿಯಾ ಮತ್ತು ಕೆಲ ಅಧಿಕಾರಿಗಳ ಅಪವಿತ್ರ ಮೈತ್ರಿ ಅದಕ್ಕೆ ಅಡ್ಡಿಯಾಗಿದೆ. ರಾಜ್ಯಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಿ ಬಡವರ ಪರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಾ.ಗೋಪಾಲ ದಾಬಡೆ ಒತ್ತಾಯಿಸಿದರು.