

ಹಾವೇರಿ: ಸುಗಮ ಸಂಗೀತಕಾರ ನರಸಿಂಹ ಕೋಮಾರ ಮತ್ತು ವಿಶ್ವನಾಥ ಹಿರೇಮಠ ತಂಡ ನಾಟಕಕಾರ ಶಾಂತಕವಿ ವಿರಚಿತ ‘ಉಷಾ ಹರಣ’ ನಾಟಕದ ಅಭಿವಂದನಂ ನಿಮಗೆ ಅಭಿವಂದನಂ ಹಾಗೂ ತಾನಾನ ತಾನಾನಾ ತಾನಾ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.
ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಮರೆತು ಹೋಗುತ್ತಿರುವ ಡೊಳ್ಳಿನಪದ, ರಂಗಗೀತೆಗಳ ಸಂಗಮ ಗಾನ ಸಂಗಮ ಎಂಬ ಹೆಸರಿನ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಜಮಖಂಡಿ ಬಳಿಯ ಮದರ್‌ಖಂಡಿಯ 83 ವರ್ಷದ ಡೊಳ್ಳಿನ ಪದಗಾರ ಬೀರಪ್ಪ ಬಿಜ್ಜಿಗಾರ ‘ಶಬ್ದ ದೀಪ ಬೆಳಗ್ಯಾವೋ ದೇವ, ನಿಶ್ಯಬ್ದ ರಾತ್ರಿಯಲ್ಲಿ ದೇವ’ ಎಂಬ ಡೊಳ್ಳಿನ ಪದ ಕೇಳುಗರನ್ನು ಗುಂಗು ಹಿಡಿಸಿತು.
ಇವರ ಜತೆಗೆ ಗಿರಿಜಾ ಮಳಗಿ, ಪ್ರತೀಕ್ಷಾ ಕೋಮಾರ, ನಿಖಿತಾ ಮಾಳಗಿ, ಶ್ರವಣ ಕುಲಕರ್ಣಿ ಸಾಥ್ ನೀಡಿದರು. ಕಣವಿಸಿದ್ದಿಗೇರಿ ಗ್ರಾಮದ ಕಣವೆಪ್ಪ ಕಬ್ಬಾರ, ಧರ್ಮಪ್ಪ ಪೂಜಾರ, ವೆಂಕಪ್ಪ ಕಬ್ಬಾರ ಹಾಗೂ ಮಂಜಪ್ಪ ಜೊಗೇರ ಡೊಳ್ಳುಗಳನ್ನು ಬಾರಿಸಿದರು.
ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಮಳಗಿ ಮಾತನಾಡಿ, ರಂಗಗೀತೆಗಳು ನಮ್ಮ ಸಾಂಸ್ಕೃತಿಕ ಸಂಪತ್ತು, ಆಧುನಿಕತೆಯಲ್ಲಿ ಕಳೆದು ಹೋಗಬಾರದು. ಇವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದರು.
ವೇದಿಕೆಯಲ್ಲಿ ಹಿರಿಯ ಕವಯತ್ರಿ ಡಾ.ಶಾರದಾ ಮುಳ್ಳೂರು ಇದ್ದರು. ಲಲಿತಕಲಾ ಅಕಾಡೆಮಿ ನೂತನ ಸದಸ್ಯ ಕರಿಯಪ್ಪ ಹಂಚಿನಮನಿ ನಿರೂಪಿಸಿದರು.