ಸಂತಾನ ಶಕ್ತಿ ಹರಣ ಚಿಕಿತ್ಸೆ ಆರಂಭ; ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ಡಿಯುಡಿಸಿ ಕಾರ್ಯಾಚರಣೆ

22 HVR 6
Published on

ಹಾವೇರಿ: ಜಿಲ್ಲೆಯ ಹಲವು ನಗರ, ಪಟ್ಟಣಗಳಲ್ಲಿ ವಿಪರೀತವಾಗಿರುವ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ಜಿಲ್ಲಾ ನಗರಾಭಿವೃದ್ಧಿ ಕೋಶ(ಡಿಯುಡಿಸಿ)ದಿಂದ ಜಿಲ್ಲೆಯ ಪ್ರಮುಖ ನಗರಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಆರಂಭಿಸಲಾಗಿದೆ.
ಎನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಕಾರ್ಯಕ್ರಮದ ಅಡಿಯಲ್ಲಿ ಚಿಕ್ಕಬಳ್ಳಾಪುರದ ಎಎಸ್‌ಆರ್‌ಎ ಎನಿಮಲ್ ವೆಲ್‌ಫೇರ್ ಆರ್ಗನೈಸೇಶನ್ ಸಂಸ್ಥೆ ಜಿಲ್ಲೆಯ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವ ಗುತ್ತಿಗೆ ನೀಡಲಾಗಿದೆ.
ಸರ್ಕಾರದ ಗೈಡ್‌ಲೈನ್ ಪ್ರಕಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಸಂಸ್ಥೆ ವತಿಯಿಂದ ಬ್ಯಾಡಗಿಯಲ್ಲಿ ನಿರ್ಮಿಸಿರುವ ಶೆಡ್‌ನಲ್ಲಿ ಬ್ಯಾಡಗಿಯ 300 ಹಾಗೂ ರಾಣೆಬೆನ್ನೂರ ನಗರದ 780 ಬೀದಿ ನಾಯಿಗಳನ್ನು ಹಿಡಿದು ತಂದು ಶಸ್ತ್ರಚಿಕಿತ್ಸೆ ಮಾಡಿ, ಮೂರು, ನಾಲ್ಕು ದಿನ ಆರೈಕೆ ಮಾಡಿ, ವಾಪಸ್ ಅವು ಇದ್ದ ಜಾದಕ್ಕೇ ಬಿಟ್ಟು ಬರಲಾಗುತ್ತಿದೆ.
ಗೈಡ್‌ಲೈನ್ ಪ್ರಕಾರ 45 ಕಿಮೀ ವ್ಯಾಪ್ತಿಯಲ್ಲಿ ಶೆಡ್ ನಿರ್ಮಿಸಬೇಕಿದೆ. ಹಾಗಾಗಿ, ಹಾವೇರಿ ಹಾಗೂ ಸವಣೂರಲ್ಲಿ ಪ್ರತ್ಯೇಕ ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೆಡ್ ನಿರ್ಮಾಣಗೊಂಡ ಬಳಿಕ ಉಳಿದ ನಗರ, ಪಟ್ಟಣಗಳಲ್ಲೂ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಕೋಶಾಧಿಕಾರಿ ಮಮತಾ ಹೊಸಗೌಡ್ರ ‘ವಿಜಯವಾಣಿ’ಗೆ ತಿಳಿಸಿದರು.
ಹಾವೇರಿ, ರಾಣೆಬೆನ್ನೂರ, ರಟ್ಟಿಹಳ್ಳಿ, ಹಿರೇಕೆರೂರ, ಬ್ಯಾಡಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಾಯಿಗಳ ಹಾವಳಿ ಹೆಚ್ಚಾಗಿರುವ ಕುರಿತು ‘ವಿಜಯವಾಣಿ’ ಇತ್ತೀಚೆಗೆ ಪ್ರತ್ಯೇಕವಾಗಿ ವರದಿಗಳನ್ನು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತಿರುವ ಡಿಯುಡಿಸಿ ಕ್ರಮಕ್ಕೆ ಮುಂದಾಗಿದೆ.
ಎರಡು ನಗರಕ್ಕೆ 17.82 ಲಕ್ಷ ಖರ್ಚು
ಒಂದು ನಾಯಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ, ಆರೈಕೆ ಮಾಡಿ ವಾಪಸ್ ಬಿಡಲು ಗುತ್ತಿಗೆ ಪಡದ ಸಂಸ್ಥೆಗೆ 1,650 ರೂ. ನಿಗಧಿಪಡಿಸಲಾಗಿದೆ. ಈಗಾಗಲೇ ಬ್ಯಾಡಗಿ ಮತ್ತು ರಾಣೆಬೆನ್ನೂರ ನಗರದ 1,080 ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇದರ ವೆಚ್ಚ 17,82,000 ರೂ. ಆಗಿದೆ ಎಂದು ಡಿಯುಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net