

ಹಾವೇರಿ: ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಹಾಗೂ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ದೇಶಾದ್ಯಂತ ವೈದ್ಯರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಪ್ರತಿಭಟನೆಗೆ ಜಿಲ್ಲೆಯಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ಜಿಲ್ಲಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಹೊರ ರೋಗಿಗಳ ವಿಭಾಗ (ಓಪಿಡಿ) ಸೇವೆ ಬಂದ್ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ತುರ್ತು ಚಿಕಿತ್ಸೆ ಮಾತ್ರ ಪ್ರಾರಂಭವಾಗಿತ್ತು.
ವೈದ್ಯಕೀಯ ಅಧಿಕಾರಿ, ಸಿಬ್ಬಂದಿ ಕೈಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಸ್ಥಳೀಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಸೇರಿ ಖಾಸಗಿ ಆಸ್ಪತ್ರೆಗಳ ಓಪಿಡಿಗಳನ್ನು ಬಂದ್ ಮಾಡಲಾಗಿತ್ತು. ವೈದ್ಯರ ಪ್ರತಿಭಟನೆ ಪರಿಣಾಮ ರೋಗಿಗಳು ಮತ್ತು ಅವರ ಸಂಬಂಧಿಕರು ಸೂಕ್ತ ಚಿಕಿತ್ಸೆ ಸಿಗದೆ ಸಂಕಷ್ಟ ಎದುರಿಸುವಂತಾಯಿತು.
ಪ್ರತಿಭಟನೆಯ ಮಾಹಿತಿ ಇಲ್ಲದೇ ಬೆಳಗ್ಗೆಯೇ ನಗರದ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಆಗಮಿಸಿದ್ದ ರೋಗಿಗಳು ಚಿಕಿತ್ಸೆ ಸಿಗದೇ ಪರದಾಡಿದರು. ಕೆಲವು ರೋಗಿಗಳು ಆಸ್ಪತ್ರೆಯ ಮುಂಭಾಗ ಗಂಟೆಗಟ್ಟಲೆ ಕಾದು ಕುಳಿತರೂ ವೈದ್ಯರ ಸೇವೆ ಲಭ್ಯವಾಗದೇ ಮರಳಿ ಊರಿಗೆ ತೆರಳಿದರು. ದಿನವಿಡಿ ವೈದ್ಯರ ಪ್ರತಿಭಟನೆಯಿಂದಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು ರೋಗಿಗಳಿಲ್ಲದೇ ಬಿಕೋ ಎನ್ನುತ್ತಿರುವುದು ಕಂಡು ಬಂತು.
ರಾಜ್ಯ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಂಒಎ) ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು.