ಮೂರು ತಾಸು ಭಾರತನಾಟ್ಯ ಪ್ರದರ್ಶಿಸಿದ ದಿವ್ಯಾ ನಾಯ್ಕ; ಭಾರತನಾಟ್ಯ ರಂಗಪ್ರವೇಶ ಕಾರ್ಯಕ್ರಮ

14 HVR 7 A
Published on

ಹಾವೇರಿ: ನಗರದ ಗೆಳೆಯರ ಬಳಗ ಪ್ರಾಥಮಿಕ ಶಾಲೆಯ ಕಲಾಭವನದಲ್ಲಿ ಭಾನುವಾರ ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿಂದ ಆಯೋಜಿಸಿದ್ದ ಭಾರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ವಿದುಷಿ ದಿವ್ಯಾ ಹನುಮಂತ ನಾಯ್ಕ ಸತತ ಮೂರು ತಾಸುಗಳವರೆಗೆ ಭರತನಾಟ್ಯ ಪ್ರದರ್ಶಿಸಿದರು.

ವಿದುಷಿ ದಿವ್ಯಾ ನಾಯ್ಕ ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಶಿವಸ್ತುತಿ, ಗಂಗಾ, ವರ್ಣ, ದೇವರನಾಮ ಹಾಗೂ ತಿಲ್ಲಾನ ನೃತ್ಯಗಳನ್ನು ನವರಸ ಭಂಗಿಗಳನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿದರು.

ಡಾ.ಸಹನಾ ಪ್ರದೀಪ ಭಟ್ಟ ಅವರಿಂದ ನಟುವಾಂಗ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಅವರು ಹಾಡುಗಾರಿಕೆ, ವಿದ್ವಾನ್ ಪಂಚಮ್ ಉಪಾಧ್ಯಾಯ ಅವರು ಮೃದಂಗ ವಾದನ, ವಿದ್ವಾನ್ ಜಯರಾಮ ಕೊಳಲುವಾದನ, ಹಾಗೂ ವಿದ್ವಾನ್ ಅರುಣ ಕುಮಾರ ಅವರು ರಿದಂ ಪ್ಯಾಡ್ ಸಾಥ್ ನೀಡಿದರು.

ದಿವ್ಯಾ ಅಂತಾರಾಷ್ಟ್ರ ಮಟ್ಟದಲ್ಲಿ ಮಿಂಚಲಿ; ಡಾ.ಎನ್.ಆರ್ ಬಿರಸಾಲ

ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಆರ್ ಬಿರಸಾಲ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದುಷಿ ದಿವ್ಯಾ ನಾಯ್ಕ ಬಹುಮುಖ ಪ್ರತಿಭೆಯಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿವ್ಯಾ ಅವರ ಹೆಜ್ಜೆ ಹಾಗೂ ಗೆಜ್ಜೆನಾದ ಕೇಳಿಸುವಂತಾಗಲಿ ಎಂದು ಹಾರೈಸಿದರು. ದಿವ್ಯಾ ಎಂ.ಎಸ್ಸಿ ಬಿ.ಇಡಿ ವಿದ್ಯಾರ್ಹತೆ ಹೊಂದಿದ್ದು, ಅವರು ತಮ್ಮ ಓದಿನ ಜತೆಗೆ, ಬ್ಯಾಡ್ಮಿಂಟನ್ ಕ್ರೀಡೆ ಹಾಗೂ ನೃತ್ಯ ಕಲೆಯಲ್ಲಿಯೂ ಸಾಧನೆ ಮಾಡಿದ್ದಾರೆ ಎಂದರು.

ಡಾ.ಸಹನಾ ಪ್ರದೀಪ ಭಟ್ಟ ಮಾತನಾಡಿ, ದಿವ್ಯಾಳ ಸಾಧನೆಗೆ ಅವಳ ಶ್ರದ್ಧೆ, ಶಿಸ್ತು ಹಾಗೂ ತಾಳ್ಮೆ ಕಾರಣವಾಗಿದೆ. ಅವಳು ತನ್ನ ಓದು ಹಾಗೂ ನೃತ್ಯವನ್ನು ಎರಡು ಸರಿಸಮಾನವಾಗಿ ತೆಗೆದುಕೊಂಡು ಹೋಗುವ ಮೂಲಕ ಓದು ಹಾಗೂ ನೃತ್ಯದಲ್ಲಿಯೂ ಸಾಧನೆ ಮಾಡಿದ್ದಾಳೆ ಎಂದರು.

ಶಿರಸಿ ನಾಟ್ಯಾಜಲಿ ನೃತ್ಯ ಕಲಾ ಕೇಂದ್ರದ ಪ್ರದೀಪ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹನುಮಂತಗೌಡ ಗೊಲ್ಲರ, ಪತ್ರಕರ್ತ ವಿಜಯ ಹೂಗಾರ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ವೆಂಕನಗೌಡ ಆರ್. ಪಾಟೀಲ ಮಾತನಾಡಿದರು.

ರಾಘವೇಂದ್ರ ಹೆಗಡೆ ಸ್ವಾಗತಿಸಿದರು, ಸತೀಶ ಮೂರೂರು ನಿರೂಪಿಸಿದರು.

ಗುರುವಂದನೆ:

ಸಮಾರಂಭದಲ್ಲಿ ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಹಾಗೂ ಡಾ.ಸಹನಾ ಪ್ರದೀಪ ಭಟ್ ಅವರಿಗೆ ಮತ್ತು ವಿನುತಾ ಭಟ್ ಅವರಿಗೆ ವಿದುಷಿ ದಿವ್ಯಾ ಹನಮಂತ ನಾಯ್ಕ ಗುರುವಂದನೆ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net