ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ; ಹೆಚ್ಚುವರಿ ನೀರಿನ ಮೂಲಗಳನ್ನು ಗುರುತಿಸಿ; ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ಆರ್.ವಿಶಾಲ ಸೂಚನೆ

19 HVR 8
Published on

ಹಾವೇರಿ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ವಿತ್ತೀಯ ಸುಧಾರಣೆ, ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್.ವಿಶಾಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಗರಾಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯಾವ ನೀರಿನ ಮೂಲದಿಂದ ನಗರ-ಪಟ್ಟಣ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತದೆ. ನೀರಿನ ಮೂಲ, ದಾಸ್ತಾನು ವಿವರ, ದಾಸ್ತಾನು ಮಾಡಲಾದ ನೀರು ಎಷ್ಟು ತಿಂಗಳವರೆಗೆ ಪೂರೈಸಲು ಸಾಧ್ಯವಾಗುತ್ತದೆ ಎಂಬ ವಿವರ ಸಲ್ಲಿಸುವಂತೆ ಸೂಚಿಸಿದರು.
ನಗರದ ನೀರಿನ ಕರ, ಮನೆಗಳ ಕರ ಹಾಗೂ ಮಳಿಗೆಗಳ ಬಾಡಿಗೆಗಳನ್ನು ಕಾಲಮಿತಿಯೊಳಗೆ ಸಂಗ್ರಹಿಸಬೇಕು. ಕನಿಷ್ಠ ಶೇ.75ರಷ್ಟು ಪ್ರಮಾಣದಲ್ಲಿ ಕರ ಸಂಗ್ರಹಿಸಬೇಕು. 14 ಮತ್ತು 15ನೇ ಹಣಕಾಸು ಯೋಜನೆಯಡಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು 15 ದಿನದೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಗಡುವು ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹಾವೇರಿ ಉಪವಿಭಾಗಾಧಿಕಾರಿ ಡಾ.ಕೆ.ಚನ್ನಪ್ಪ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ, ನಗರಾಭಿವೃದ್ಧಿ ಕೋಶದ ಅಭಿಯಂತರ ವಿರಕ್ತಮಠ, ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಪಿ.ಆರ್.ಹಾವನೂರ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ತಾಲೂಕು ವೈದ್ಯಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಗಳು, ಅಭಿಯಂತರರು ಹಾಗೂ ವಿವಿಧ ವೈದ್ಯರು ಉಪಸ್ಥಿತರಿದ್ದರು.
ಡಯಾಲಿಸಿಸ್ ಸೈಕಲ್ ಹೆಚ್ಚಿಸಿ :
ಜಿಲ್ಲೆಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಕುರಿತು ತಾಲೂಕು ಹಾಗೂ ಜಿಲ್ಲಾ ಮಟ್ಟದ ವೈದ್ಯರಿಂದ ಮಾಹಿತಿ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ವಿಶಾಲ ಅವರು, ಡಯಾಲಿಸಿಸ್ ಸೈಕಲ್‌ಗಳನ್ನು ಹೆಚ್ಚು ಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಿ. ಡಯಾಲಿಸಿಸ್ ಯಂತ್ರ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಿ ಎಂದರು.
ಜಿಲ್ಲಾ ಚಾಲೆಂಜ್ ಫಂಡ್‌ನಿಂದ ಡಯಾಲಿಸಿಸ್ ಯಂತ್ರ ಖರೀದಿಗೆ ಪ್ರಸ್ತಾವನೆ ಸಲ್ಲಿಸಿ, ಆರೋಗ್ಯ ಸುರಕ್ಷಾ ಸಮಿತಿಯ ಅನುದಾನದಲ್ಲಿ ಡಯಾಲಿಸಿಸ್ ಯಂತ್ರ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳ ದುರಸ್ತಿಗೆ ಕ್ರಮವಹಿಸಿ. ಕಾಲ್ಪೋಸ್ಕೋಪಿಕ್ ಯಂತ್ರ ಖರೀದಿಗೆ ಕ್ರಮವಹಿಸಿ, ಆಯುಷ್ಮ ಭಾರತ್ ಆರೋಗ್ಯ ರಕ್ಷಾ ಕರ್ನಾಟಕ ಯೋಜನೆಯಡಿ ಪ್ರತಿ ಆಸ್ಪತ್ರೆಗಳಲ್ಲಿ 10ರಿಂದ 20 ಲಕ್ಷ ರೂ. ಅನುದಾನವಿದೆ. ಈ ಆದಾಯದಲ್ಲಿ ಮಾರ್ಗಸೂಚಿಯಂತೆ ಔಷಧ ಖರೀದಿ, ಆಸ್ಪತ್ರೆಯ ಇತರ ಅಗತ್ಯತೆಗಳ ಖರೀದಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಹಲವೆಡೆ ವಾರಕ್ಕೊಮ್ಮೆ ನೀರು ಪೂರೈಕೆ
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಮಾತನಾಡಿ, ಪ್ರಸ್ತುತ ಯಾವುದೇ ವಾರ್ಡ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 238 ವಾರ್ಡ್‌ಗಳಿದ್ದು, ಪ್ರತಿದಿನ ರಾಣೇಬೆನ್ನೂರಿನ 35 ಹಾಗೂ ರಟ್ಟಿಹಳ್ಳಿಯ 15 ವಾರ್ಡುಗಳಿಗೆ, ಎರಡು ದಿನಕ್ಕೊಮ್ಮೆ ಹಿರೇಕೆರೂರಿನ 20 ವಾರ್ಡ್‌ಗಳಿಗೆ, ಮೂರು ದಿನಕ್ಕೊಮ್ಮೆ ಹಾನಗಲ್ಲ ಹಾಗೂ ಬ್ಯಾಡಗಿಯ ತಲಾ 23 ವಾರ್ಡುಗಳಿಗೆ, ಐದು ದಿನಕ್ಕೊಮ್ಮೆ ಶಿಗ್ಗಾಂವಿಯ 23 ವಾರ್ಡ್‌ಗಳಿಗೆ ಹಾಗೂ ವಾರಕ್ಕೊಮ್ಮೆ ಹಾವೇರಿಯ 31, ಗುತ್ತಲದ 18, ಸವಣೂರಿನ 27 ಹಾಗೂ ಬಂಕಾಪುರದ 23 ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಾನೇ ಖುದ್ದು ಭೇಟಿ ಕೊಡುವೆ
ನಗರದ ತ್ಯಾಜ್ಯ ವಿಲೇವಾರಿ ಕ್ರಮಬದ್ಧವಾಗಿರಬೇಕು, ಮುಂದಿನ 15 ದಿನದೊಳಗಾಗಿ ಈಗಾಗಲೇ ಪ್ರಗತಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಹಸಿ ಕಸ, ಒಣ ಕಸಗಳ ಪ್ರತ್ಯೇಕ ಸಂಗ್ರಹ ಹಾಗೂ ವಿಲೇವಾರಿ, ನಗರದ ಸ್ವಚ್ಛತಾ ಕಾರ್ಯ, ಡ್ರೈನೇಜ್‌ಗಳ ಸ್ವಚ್ಛತಾ ಕಾರ್ಯವನ್ನು ಕೇವಲ ಪೌರಕಾರ್ಮಿಕರ ಮೇಲೆ ಬಿಡದೆ ಖುದ್ದಾಗಿ ಎಲ್ಲ ಮುಖ್ಯಾಧಿಕಾರಿಗಳು ಬೆಳಗಿನ ವೇಳೆ ನಗರ ಸಂಚಾರ ಮಾಡಿ ಖುದ್ದಾಗಿ ಪರಿಶೀಲಿಸಬೇಕು. ನಾನೇ ಖುದ್ದಾಗಿ ಅನಿರೀಕ್ಷಿತ ಭೇಟಿ ನೀಡಿ, ನಗರ ಸ್ವಚ್ಛತೆ ಪರಿಶೀಲಿಸುವುದಾಗಿ ಆರ್.ವಿಶಾಲ ಎಚ್ಚರಿಕೆ ನೀಡಿದರು.
ಸಂತಾನ ಹರಣ ಕ್ಯಾಂಪ್ ಹೆಚ್ಚಿಸಿ
ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕ್ಯಾಂಪ್‌ಗಳನ್ನು ಹೆಚ್ಚು ಮಾಡಬೇಕು. ಹೆಚ್ಚು ಶಸ್ತ್ರ ಚಿಕಿತ್ಸೆಗಳು ನಡೆಯಬೇಕು. ತಾಲೂಕುವಾರು ವೈದ್ಯರಿಗೆ ಕ್ಯಾಂಪುಗಳ ಗುರಿ ನಿಗದಿಪಡಿಸಿ ಜನರಿಗೆ ಅರಿವು ಮತ್ತು ಮನವೊಲಿಸಿ ಶಸ್ತ್ರಚಿಕಿತ್ಸಾ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಬಹಳ ಜನರಿಗೆ ಅನುಕೂಲವಾಗಲಿದೆ ಎಂದು ಆರ್.ವಿಶಾಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net