ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಎಲ್ಲೆಡೆ ತಂಪು ತಂಪು ಕೂಲ್ ಕೂಲ್ ವಾತಾವರಣ ಸೃಷ್ಟಿ

20 HVR 9
Published on

ಹಾವೇರಿ: ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯ ಇತರ ತಾಲೂಕುಗಳಲ್ಲಿ ಗುರುವಾರ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಜಿಲ್ಲೆಯಾದ್ಯಂತ ತಂಪು ತಂಪು ಕೂಲ್ ಕೂಲ್ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದರೆ, ಜನ ಮನೆ ಬಿಟ್ಟು ಹೊರಗೆ ಬಾರದಂಥ ಪರಿಸ್ಥಿತಿನ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 6.0 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, ಸರಾಸರಿ 11.1 ಮಿ.ಮೀ. ಮಳೆ ಸುರಿದಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಅಧಿಕ 19.2 ಮಿ.ಮೀ. ಮಳೆ ಸುರಿದಿದೆ. ಶಿಗ್ಗಾಂವಿ ತಾಲೂಕಿನಲ್ಲಿ 14.8 ಮಿ.ಮೀ., ಬ್ಯಾಡಗಿ ತಾಲೂಕಲ್ಲಿ 11.1 ಮಿ.ಮೀ., ಸವಣೂರ ತಾಲೂಕಲ್ಲಿ 10 ಮಿ.ಮೀ., ಹಾವೇರಿ ತಾಲೂಕಲ್ಲಿ 9.7 ಮಿ.ಮೀ., ರಟ್ಟಿಹಳ್ಳಿ ತಾಲೂಕಲ್ಲಿ 9.3 ಮಿ.ಮೀ., ಹಿರೇಕೆರೂರ ತಾಲೂಕಲ್ಲಿ 8.6 ಮಿ.ಮೀ., ರಾಣೆಬೆನ್ನೂರ ತಾಲೂಕಲ್ಲಿ 5.4 ಮಿ.ಮೀ. ಮಳೆ ಸುರಿದಿದೆ.
ಗುರುವಾರ ನಿರಂತರವಾಗಿ ಜಿಟಿ ಜಿಟಿ ಮಳೆ, ಆಗಾಗ ದೊಡ್ಡ ಮಳೆ ಸುರಿಯುತ್ತಿರುವ ಕಾರಣ ಸೂರ್ಯ ಮರೆಯಾಗಿದ್ದ. ಇದರಿಂದಾಗಿ ತಂಪಾದ ವಾತಾವರಣ ಸೃಷ್ಟಿಯಾಗಿತ್ತು. ಹಾಗಾಗಿ, ಜನ ಥಂಡಿ ಹಾಗೂ ಮಳೆಯ ಕಾರಣಕ್ಕೆ ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕಿದರು. ಅನಿವಾರ್ಯ ಇದ್ದವರು ಛತ್ರಿ, ರೇನ್‌ಕೋಟ್ ಹಾಕಿಕೊಂಡು ಹೊರಗೆ ಬಂದಿದ್ದರು. ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳುವಾಗ ವಾಪಸ್ ಮನೆಗೆ ಬರುವಾಗ ಹರಸಾಹಸ ಪಟ್ಟಿದ್ದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net