ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ; ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ; ಜಿಲ್ಲಾಧಿಕಾರಿ ರಘುನಂದನ ಮೂರ್ತಿ

24 HVR 6 B
Published on

ಹಾವೇರಿ: ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸ ಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು.
ಇಲ್ಲಿನ ಕೆರೆಮತ್ತಿಹಳ್ಳಿ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಶುಕ್ರವಾರ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಒಂದು ಸಂಶೋಧನೆ ಪ್ರಕಾರ ಮಧ್ಯಮ ವಯಸ್ಕರರಲ್ಲಿ ಡಯಾಬಿಟಿಸ್ ಹಾಗೂ ಮಧುಮೇಹ ಹೆಚ್ಚಾಗಿ ಕಂಡುಬರುತ್ತಿದೆ. ಬಿಡುವಿಲ್ಲದ ಕಚೇರಿ ಕೆಲಸ ಕಾರ್ಯಗಳಿಂದ ಹಾಗೂ ಒತ್ತಡದಿಂದಾಗಿ ನಾವುಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತಿವೆ. ಬಿಡುವಿನ ವೇಳೆಯಲ್ಲಿ ನಾವೆಲ್ಲರೂ ಆದಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅದರಲ್ಲೂ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ. ನಾಲ್ಕು ದಿನಗಳ ಈ ಕ್ರೀಡಾಕೂಟದಲ್ಲಿ ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದ ಭಾಗವಹಿಸಿ ಎಂದು ಶುಭ ಕೋರಿದರು.
ಆರ್.ಎಸ್.ಐ. ಶಂಕರಗೌಡ ಪಾಟೀಲ ಅವರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಸಿ. ವಂದಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.
ಗಮನ ಸೆಳೆದ ಪಥಸಂಚಲನ
ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ರಾಣೇಬೆನ್ನೂರ, ಶಿಗ್ಗಾಂವಿ ಉಪವಿಭಾಗಗಳ ತಂಡ ಹಾಗೂ ಮಹಿಳಾ ಪೊಲೀಸ್ ಕ್ರೀಡಾ ತಂಡಗಳು ಗುಲಾಬಿ, ಕೇಸರಿ, ನೀಲಿ ಹಾಗೂ ಇತರ ಬಣ್ಣದ ಟಿ-ಶರ್ಟ್ ಧರಿಸಿ ಶಿಸ್ತುಬದ್ಧ ಪಥ ಸಂಚಲನ ನಡೆಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಚನ್ನಪ್ಪ ಪೂಜಾರ, ನಾಗರಿಕ ಪೊಲೀಸ್ ಉಪ ವಿಭಾಗದ ಮಂಜುನಾಥ, ರಾಣೆಬೆನ್ನೂರ ಉಪವಿಭಾಗದಿಂದ ಪಿಎಸ್‌ಐ ಕೃಷ್ಣಪ್ಪ, ಮಹಿಳಾ ಪೊಲೀಸ್ ಸುಜಾತಾ ಪಾಟೀಲ, ಶಿಗ್ಗಾಂವಿ ಉಪ ವಿಭಾಗದ ಸಂತೋಷಕುಮಾರ ಆಡೂರ ನೇತೃತ್ವದಲ್ಲಿ ನಡೆದ ಪಥಸಂಚಲನ ಎಲ್ಲರ ಗಮನ ಸೆಳೆಯಿತು.
ಕ್ರೀಡಾಜ್ಯೋತಿ
ಕ್ರೀಡಾಕೂಟದ ಅಂಗವಾಗಿ ಕ್ರೀಡಾ ಜ್ಯೋತಿಯನ್ನು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಬೆಳಗಿಸಿದರು. ಕಳೆದ ಏಳು ವರ್ಷಗಳಿಂದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಕ್ರೀಡಾಪಟು ಸಂತೋಷ ನಾಯಕ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net