

ಹಾವೇರಿ: ಪ್ರಸಕ್ತ ಸಾಲಿನಲ್ಲಿ ದಾಖಲಾದ 251 ಕಳ್ಳತನ, ದರೋಡೆ, ಸುಲಿಗೆ, ಹಣಕ್ಕಾಗಿ ಕೊಲೆ ಪ್ರಕರಣಗಳಲ್ಲಿ 60 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಹಾವೇರಿ ಜಿಲ್ಲಾ ಪೊಲೀಸರು ಆರೋಪಿತರಿಂದ ವಶಪಡಿಸಿಕೊಂಡಿದ್ದ 2,26,88,472 ರೂ. ನಗದು, ಚಿನ್ನಾಭರಣ ಹಾಗೂ ಸ್ವತ್ತುಗನ್ನು ವಾರಸುದಾರರಿಗೆ ಶುಕ್ರವಾರ ಹಿಂದಿರುಗಿಸಿದರು.
ಹಾವೇರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಜಿಲ್ಲೆಯಲ್ಲಿ ವರದಿಯಾಗಿದ್ದ 60 ಕಳ್ಳತನ, ದರೋಡೆ ಹಾಗೂ ಇತರೆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು. ತಮ್ಮ ಒಡವೆ, ಚಿನ್ನಾಭರಣ, ಬೈಕ್, ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ದೂರುದಾರರು, ತಮ್ಮ ವಸ್ತುಗಳು ಸಿಕ್ಕ ಖುಷಿಯನ್ನು ಪೊಲೀಸರೊಂದಿಗೆ ಹಂಚಿಕೊಂಡರು. ಖಾಕಿ ಪಡೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ, ಡಿಎಸ್‌ಪಿಗಳಾದ ಶ್ರೀಧರ, ಶಿವಾನಂದ ಚಲವಾದಿ, ಮಂಜುನಾಥ, ಎಂ.ಎಸ್.ಪಾಟೀಲ ಹಾಗೂ ಜಿಲ್ಲೆಯ ಎಲ್ಲ ಸಿಪಿಐ, ಪಿಐ, ಪಿಎಸ್‌ಗಳು ಪಾಲ್ಗೊಂಡಿದ್ದರು.
ಶೇ.44.25ರಷ್ಟು ರಿಕವರಿ
2023ರ ಜನವರಿಯಿಂದ ಜೂನ್‌ವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 251 ಮನೆ, ಬೈಕ್, ಚಿನ್ನದ ಸರ ಕಳ್ಳತನ, ದರೋಡೆ, ಸುಲಿಗೆ, ಲಾಭಕ್ಕಾಗಿ ಕೊಲೆಯಂಥ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 60 ಪ್ರಕರಣಗಳನ್ನು ಪತ್ತೆ ಹಚ್ಚಿ ಶೇ.44.25ರಷ್ಟು ಸ್ವತ್ತುಗಳನ್ನು ಜಿಲ್ಲಾ ಪೊಲೀಸರು ರಿಕವರಿ ಮಾಡಿದ್ದಾರೆ.
ಲಾಭಕ್ಕಾಗಿ ಕೊಲೆಗೈದಿದ್ದ 1 ಪ್ರಕರಣ ಪತ್ತೆ ಹಚ್ಚಿ 1.33 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. 2 ಡಕಾಯಿತಿ, 1 ಸುಲಿಗೆ, 14 ಮನೆ ಕಳ್ಳತನ, 12 ಬೈಕ್ ಕಳವು, 1 ಲಾರಿ ಕಳವು ಪ್ರಕರಣ, 42 ಇತರೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.