

ಹಾವೇರಿ: ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಸರ್ಕಾರದ ಗಮನಕ್ಕೆ ತರದೇ ಉಪ ಗುತ್ತಿಗೆದಾರನಿಗೆ ಕೊಟ್ಟಿರುವುದು ಅಕ್ರಮವಲ್ಲವೇ ? ಇದು ಸರ್ಕಾರಕ್ಕೆ ಮಾಡಿದ ಮೋಸ ಅಲ್ಲವೇ ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು. ಕೂಡಲೇ ಗುತ್ತಿಗೆದಾರನಿಗೆ ನೋಟಿಸ್ ಕೊಡಿ. ಅಗತ್ಯ ಎನಿಸಿದರೆ ಆತನನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಶನಿವಾರ ಇಲ್ಲಿನ ಜಿಲ್ಲಾಸ್ಪತ್ರೆಯ ಕಟ್ಟಡದ ಮೂರನೇ ಮಹಡಿ ಮೇಲೆ ನಿರ್ಮಿಸುತ್ತಿರುವ 20 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಕಾಮಗಾರಿ ಕಳಪೆಯಾಗಿದ್ದನ್ನು ಗಮನಿಸಿ ಆರೋಗ್ಯ ಇಲಾಖೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಗರಂ ಆದರು. ಗುತ್ತಿಗೆದಾರ ಸ್ಥಳಕ್ಕೆ ಬಾರದಿರುವ ಕುರಿತು ವಿಚಾರಿಸಿದಾಗ, ಆತ ಉಪ ಗುತ್ತಿಗೆ ನೀಡಿರುವ ವಿಷಯ ಗೊತ್ತಾಯಿತು. ಸಿಎಂ ಬಂದಾಗಲೂ ಆತ ಬಂದಿರಲಿಲ್ಲ. ಈಗಲೂ ಬಂದಿಲ್ಲ. ಉಪ ಗುತ್ತಿಗೆ ಕೊಟ್ಟದ್ದು ತಪ್ಪಲ್ಲವೇ. ಕೂಡಲೇ ಗುತ್ತಿಗೆದಾರನಿಗೆ ನೋಟಿಸ್ ಕೊಡಿ. ಮಳೆಯಿಂದ ಸೋರಿಕೆ ತಡೆಗಟ್ಟಲು ಸಿಎಂ ಭೇಟಿ ನೀಡಿದ್ದ ವೇಳೆ ನೀಡಿದ್ದ ಸೂಚನೆ ಅನ್ವಯ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿದರು.
ಮೂರನೇ ಮಹಡಿಯಲ್ಲಿ ಆಡಳಿತಾತ್ಮಕ ಕಚೇರಿಗಳು, ತಾಯಿ- ಮಕ್ಕಳ ವಾರ್ಡ್ ನಿರ್ಮಾಣವಾಗುತ್ತಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ತಾಯಿ- ಮಕ್ಕಳ ಆಸ್ಪತ್ರೆ ಇಷ್ಟು ಮೇಲೆ ಯಾಕೆ ? ಈ ಯೋಜನೆಯಲ್ಲಿ ಮಾಡ್ಯುಲರ್ ಆಪರೇಶನ್ ಥಿಯೇಟರ್ ಯಾಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದರು. ಗುಣಮಟ್ಟದ ಕಾಮಗಾರಿ ನಡೆಸುವಂತೆ ತಾಕೀತು ಮಾಡಿದರು.
ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ ಬಣಕಾರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಡಿಎಚ್‌ಒ ಡಾ.ಎಚ್.ಎಸ್.ರಾಘವೇಂದ್ರಮೂರ್ತಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್ ಹಾವನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಮತ್ತಿತರರು ಇದ್ದರು.