

ಹಾವೇರಿ: ಸ್ವಾತಂತ್ರ್ಯ ಹೋರಾಟದಲ್ಲಿ ಈ ದೇಶದೊಂದಿಗೆ ಮತ್ತು ನಾಡಿನೊಂದಿಗೆ ಹಾವೇರಿ ಜಿಲ್ಲೆಯ ಈ ನೆಲ ಕೂಡ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಅಖಂಡ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಇಂದಿನ ಹಾವೇರಿ ಜಿಲ್ಲೆಯ ಅನೇಕ ಮಹನೀಯರು ಭಾರತ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಪ್ರಾದೇಶಿಕ ಶಕ್ತಿಯನ್ನು ಮೆರೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪನವರು, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡರು, ಶಿವಪ್ಪ ನೇಸ್ವಿ, ಹೊಸಮನಿ ಸಿದ್ದಪ್ಪ, ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಜ್ಜೆಗುರುತುಗಳು ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿವೆ. ಹಾಗೆಯೇ ಇನ್ನೂ ಅನೇಕ ಮಹನೀಯರು ಇವರೊಂದಿಗೆ ಎಲೆಮರೆಯ ಕಾಯಿಯಂತೆ ಹಗಲಿರುಳು ದುಡಿದಿದ್ದಾರೆ. ಅವರೆಲ್ಲರಿಗೂ ಈ ಶುಭ ಸಂದರ್ಭದಲ್ಲಿ ನಮ್ಮೆಲರ ಕೃತಜ್ಞತೆಗಳು ಸಲ್ಲಲೇಬೇಕಿದೆ ಎಂದರು.
ಸ್ವಾತಂತ್ರ್ಯ ನಮ್ಮ ಹಕ್ಕು, ಅಭಿವೃದ್ಧಿ ನಮ್ಮ ಧ್ಯೇಯ, ಕೃಷಿ ನಮ್ಮ ಆತ್ಮ, ರೈತ ನಮ್ಮ ಬೆನ್ನೆಲುಬು, ದೇಶ ಕಾಯುವ ಯೋಧ, ದೇಶ ಕಟ್ಟುವ ಯುವ ಜನತೆ ಈ ದೇಶದ ಶಕ್ತಿ ರೂಪಗಳು. ಇವುಗಳ ಜತೆಗೆ ಇನ್ನೂ ಅನೇಕ ಸಂಗತಿಗಳು ಈ ನಾಡಿನ ಸಮಗ್ರ ವಿಕಾಸಕ್ಕೆ ಕಾರಣವಾಗಿರುವುದನ್ನು ನಾವು ಮರೆಯುವಂತಿಲ್ಲ. ರಾಜ-ಮಹಾರಾಜರು ಕಟ್ಟಿದ, ಸಾರ್ವಭೌಮರು ಆಳಿದ, ಶರಣರು-ಸಂತರು ಹರಸಿದ, ಕವಿ-ಕಲಾವಿದರು ಹಾಡಿದ, ವಿವೇಕಿ-ವಿಜ್ಞಾನಿ-ವಿದ್ವಾಂಸರುಗಳು ರೂಪಿಸಿದ ಈ ದೇಶದ ಆತ್ಮಶಕ್ತಿಯನ್ನು ನಾವು ಅರ್ಥಪೂರ್ಣವಾಗಿ ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.
ಆಗಸ್ಟ್ 15, 1947 ಭಾರತೀಯರ ಪಾಲಿಗೆ ಕೇವಲ ಒಂದು ದಿನಾಂಕವಲ್ಲ. ಅದು 200 ವರ್ಷಗಳ ಕಾಲ ಈ ದೇಶವನ್ನು ತಮ್ಮ ಬಿಗಿ ಮುಷ್ಠಿಯಲ್ಲಿ ಇಟ್ಟುಕೊಂಡು ಆಳಿದ ಬ್ರಿಟಿಷರನ್ನು ನಮ್ಮ ನೆಲದಿಂದ ಹೊರಹಾಕಿದ ಸಂಭ್ರಮದ ರೂಪಕವಾಗಿದೆ ಎಂದರು.
ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವೇ? ನಮ್ಮ ಸರ್ಕಾರ ಅಭಿವೃದ್ಧಿಯ ಅನೇಕ ಕನಸುಗಳನ್ನು ಕಟ್ಟಿಕೊಂಡಿದೆ. ಅವುಗಳ ಸಾಕಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ವಿವಿಧ ಇಲಾಖೆಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ನವಚೈತನ್ಯ ಮೂಡಿಸಿದೆ ಎಂದರು.
ಕೋಟ್:
ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ನನೆಗುದಿಗೆ ಬಿದ್ದಿದ್ದ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ನಿರಂತರವಾಗಿ ಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿ, ಅವುಗಳನ್ನು ಕಾರ್ಯಗತಗೊಳಿಸಲು ಮುಂದಾಗಿದ್ದೇನೆ.
- ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ