

ಹಾವೇರಿ: ಜಿಲ್ಲಾ ಕ್ರೀಡಾಂಗಣ ಕೆಸರುಮಯ ಆಗಿರುವುದನ್ನು ನೋಡಿ ನನಗೂ ಬೇಸರ ಉಂಟಾಯಿತು. ಮಕ್ಕಳು ಆ ಕೆಸರಲ್ಲಿ ಓಡಾಡುವುದು ನೋಡಲಾಗದು. ಶೀಘ್ರದಲ್ಲೇ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣ ಸೇರಿ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು, ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ 10 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಕ್ಯಾಬಿನೇಟ್‌ನಲ್ಲಿ ಅನುಮೋದನೆ ಸಿಕ್ಕಿರುವ ಕುರಿತು ಪರಿಶೀಲಿಸಿ, ಕ್ರೀಡಾಂಗಣಕ್ಕೆ, ಕ್ರೀಡಾಪಟುಗಳಿಗೆ ಹೊಸರೂಪ ಕೊಡಲಾಗುವುದು ಎಂದರು.
ಕುಡಿಯುವ ನೀರಿನ 3 ಯೋಜನೆಗಳ ಪೈಕಿ ಆಣೂರ ಹಾಗೂ ತಡಸ ಕಾಮಗಾರಿಗಳ ಒಂದು ಸುತ್ತಿನ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಲಾಗಿದೆ. ಹಂಸಭಾವಿ ಕಾಮಗಾರಿ ಮಾತ್ರ ಅರಣ್ಯ ಇಲಾಖೆಯ ಅನುಮತಿ ಕಾರಣಕ್ಕೆ ಬಾಕಿ ಇದೆ. ಶೀಘ್ರದಲ್ಲಿ ಅದೂ ಪೂರ್ಣಗೊಳ್ಳಲಿದೆ. ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ನಿರಂತರ ಉತ್ತಮ ಕಾರ್ಯಮಾಡಿದೆ ಎಂದರು.
ಹಾನಗಲ್ಲ, ಶಿಗ್ಗಾಂವಿ ತಾಲೂಕಿನಲ್ಲಿ ಅಪರಾಧ ಕೃತ್ಯಗಳ ಹೆಚ್ಚಳವಾಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಯಲ್ಲಿ ಕಾನೂನು ಸುವವಸ್ಥೆ ಕಾಪಾಡಲಾಗಿದೆ. ಸಾಮಾಜಿಕ ಜಾಲತಾಣ ಸೇರಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ, ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಯಾವುದೇ ಮಾಹಿತಿ ಕಂಡರೂ ಕೂಡಲೇ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಎಸ್‌ಪಿ ಅವರಿಗೆ ಸೂಚಿಸಿದ್ದೇನೆ ಎಂದರು.
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮೀಕ್ಷೆ ಆಗಿ ಮಂಜೂರಾತಿ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು. ರಾಜ್ಯದಲ್ಲೇ ಅತಿಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆ ಪ್ರಕರಣಗಳ ರಿಪೋರ್ಟಿಂಗ್ ವ್ಯವಸ್ಥೆ ಕುರಿತು ರೈತರೊಂದಿಗೆ ಚರ್ಚಿಸಲಾಗುವುದು. ರೈತರು ಯಾವುದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಈ ವಿಷಯವಾಗಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಶಾಸಕರ ವಿಶೇಷ ಅನುದಾನದಲ್ಲಿ ಜಿಲ್ಲಾ ಕೇಂದ್ರ ಹಾವೇರಿಯ ಸಿಗ್ನಲ್ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಒದಗಿಸುವಂತೆ ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ನಿರ್ದೇಶನ ನೀಡಿದ್ದೇನೆ. ಜಿಲ್ಲಾಸ್ಪತ್ರೆ ವಾಹನ ನಿಲುಗಡೆ ಸಮಸ್ಯೆ, ಹೂವಿನ ಮಾರುಕಟ್ಟೆ ಸ್ಥಳಾಂತರ, ಹಾನಗಲ್-ಹಾವೇರಿ ರಸ್ತೆ ದುರಸ್ತಿ, ಗುರುವಾರ ದನದ ಮಾರುಕಟ್ಟೆ ವಾಹನ ಸಂಚಾರ ಸಮಸ್ಯೆ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಎಲ್ಲವನ್ನೂ ಪರಿಶೀಲಿಸಿ, ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮೆಡಿಕಲ್ ಕಾಲೇಜ್‌ಗೆ 300 ಹಾಸಿಗೆ ಆಸ್ಪತ್ರೆ
ಈಗಾಗಲೇ ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಯಿಂದ 500 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದೆ. ಹಾವೇರಿ ವೈದ್ಯಕೀಯ ಕಾಲೇಜ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ವೈದ್ಯಕೀಯ ಕಾಲೇಜ್ ಉದ್ಘಾಟಿಸಲಾಗುವುದು. ಜತೆಗೆ ಮೆಡಿಕಲ್ ಕಾಲೇಜ್‌ನಲ್ಲಿ ಪ್ರತ್ಯೇಕ 300 ಹಾಸಿಗೆಗಳ ಆಸ್ಪತ್ರೆ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದರು.