

ಹಾವೇರಿ: ಜವಳಿ ಸಕ್ಕರೆ ಮತ್ತು ಎಪಿಎಂಸಿ ಖಾತೆ ಸಚಿವ, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಆರನೇ ಬಾರಿಗೆ ಶಾಸಕರಾಗಿರುವ ಶಿವಾನಂದ ಪಾಟೀಲರು ಎರಡನೇ ಬಾರಿಗೆ ಸಚಿವರಾಗಿದ್ದಾರೆ. 2018- 19ರ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಾಗಲಕೋಟೆ ಉಸ್ತುವಾರಿಯಾಗಿದ್ದ ಪಾಟೀಲರನ್ನು ಈ ಬಾರಿ ಹಾವೇರಿ ಜಿಲ್ಲೆಗೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ನೂತನ ಉಸ್ತುವಾರಿ ಸಚಿವರು ಜೂ.11ರಂದು ಹಾವೇರಿಗೆ ಮೊದಲ ಬಾರಿಗೆ ಆಗಮಿಸಲಿದ್ದಾರೆ. ಜಿಲ್ಲಾಡಳಿತದಿಂದ ಅಂದು ಹಮ್ಮಿಕೊಂಡಿರುವ ಗ್ಯಾರಂಟಿ ಕಾರ್ಯಕ್ರಮಗಳಲ್ಲೊಂದಾದ ಶಕ್ತಿ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.