ಜಿಲ್ಲೆಯ ಅಂಗನವಾಡಿಗಳಲ್ಲಿ ಮೂಲ ಸೌಕರ್ಯ ಕೊರತೆ; ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ

14 HVR 4 B
Published on

ಹಾವೇರಿ: ಜಿಲ್ಲೆಯ ಬಹುತೇಕ ಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಂಡುಬಂದಿದೆ. ಅಂಗನವಾಡಿ ಕೇಂದ್ರಗಳ ನ್ಯೂನ್ಯತೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ವರದಿ ತಯಾರಿಸಲಾಗಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ.ಸದಾನಂದಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪೌಷ್ಠಿಕ ನಿವಾರಣೆ ರಾಜ್ಯ ಸಲಹಾ ಸಮಿತಿ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ಹಾಗೂ ಪೆನಲ್ ವಕೀಲರ ತಂಡ ಜಿಲ್ಲೆಯ 1,991 ಅಂಗನವಾಡಿಗಳ ಪೈಕಿ 821 ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ತಯಾರಿಸಿದೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ನೀರು, ವಿದ್ಯುತ್, ಗಾಳಿ, ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ, ಆಟದ ಮೈದಾನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಲಾಗಿದೆ. 636 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಹಾಗೂ 157 ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಹಾವೇರಿ ಸಮೀಪದ ಇಜಾರಿಲಕಮಾಪೂರ ಅಂಗನವಾಡಿ ಕೇಂದ್ರ ಎ.ಡಬ್ಲ್ಯೂ.ಸಿ ನಂ.185ರಲ್ಲಿ ವಿದ್ಯುತ್ ಮತ್ತು ಶೌಚಗೃಹ ವ್ಯವಸ್ಥೆ ಇಲ್ಲ. ಬ್ಯಾಡಗಿ ತಾಲೂಕಿನ ಶಿಡೇನೂರ ಅಂಗನವಾಡಿ ಕೇಂದ್ರ-1ರಲ್ಲಿ ನೀರಿನ ಸಂಪರ್ಕ ಮತ್ತು ಶೌಚಗೃಹ ಇಲ್ಲ. ಹಾನಗಲ್ಲ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ, ಗಂಡು ಮತ್ತು ಹಣ್ಣು ಮಕ್ಕಳ ಪ್ರತ್ಯೇಕ ಶೌಚಗೃಹ ಹಾಗೂ ಪಡಿತರ ಶೇಖರಣೆ ಪರಿಕರಗಳ ಕೊರತೆ ಕಂಡುಬಂದಿದೆ. ಸವಣೂರ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಶೌಚಗೃಹ, ಕುಡಿಯುವ ನೀರು, ಪೌಷ್ಠಿಕ ಆಹಾರ, ಆಟದ ಮೈದಾನದ ಕೊರತೆ ಕಂಡು ಬಂದಿದೆ ಎಂದರು.
ಹಾವೇರಿ ತಾಲೂಕಿನ 299 ಅಂಗನವಾಡಿಗಳಲ್ಲಿ ಭೇಟಿ ನೀಡಲಾದ 34 ಅಂಗನವಾಡಿಗಳ ಪೈಕಿ ಆರು, ರಾಣೆಬೆನ್ನೂರ ತಾಲೂಕಿನ 379 ಅಂಗನವಾಡಿಗಳಲ್ಲಿ ಪೈಕಿ ಭೇಟಿ ನೀಡಲಾದ 370, ಹಿರೇಕೆರೂರು ತಾಲೂಕಿನ 365 ಅಂಗನವಾಡಿಗಳ ಪೈಕಿ 175, ಬ್ಯಾಡಗಿ ತಾಲೂಕಿನ 166 ಅಂಗನವಾಡಿಗಳಲ್ಲಿ ಭೇಟಿ ನೀಡಲಾದ ನಾಲ್ಕು ಅಂಗನವಾಡಿಗಳ ಪೈಕಿ ಮೂರು, ಹಾನಗಲ್ ತಾಲೂಕಿನ 335 ಅಂಗನವಾಡಿಗಳ ಪೈಕಿ 47, ಶಿಗ್ಗಾಂವ ತಾಲೂಕಿನ 236 ಅಂಗನವಾಡಿಗಳ ಪೈಕಿ 33, ಸವಣೂರ ತಾಲೂಕಿನ 211 ಅಂಗನವಾಡಿಗಳ ಪೈಕಿ 39 ಅಂಗನವಾಡಿಗಳು ಮೂಲ ಸೌಕರ್ಯಗಳನ್ನು ಹೊಂದಿರುತ್ತವೆ ಎಂದು ತಿಳಿಸಿದರು.
ಹಾವೇರಿ ತಾಲೂಕಿನ ಏಳು, ರಾಣೆಬೆನ್ನೂರ ತಾಲೂಕಿನ ಒಂಭತ್ತು, ಹಿರೇಕೆರೂರ ತಾಲೂಕಿನ 67, ಬ್ಯಾಡಗಿ ತಾಲೂಕಿನ ಒಂದು, ಶಿಗ್ಗಾಂವಿ ತಾಲೂಕಿನ 10, ಸವಣೂರ ತಾಲೂಕಿನ 22 ಅಂಗನವಾಡಿಗಳು ಮೂಲ ಸೌಕರ್ಯಗಳಾದ ಕುಡಿಯುವ ನೀರು, ಫ್ಯಾನ್, ವಿದ್ಯುತ್ ಹಾಗೂ ಶೌಚಗೃಹ ವ್ಯವಸ್ಥೆ ಹೊಂದಿಲ್ಲ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್.ಮುತಾಲಿಕದೇಸಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net