

ಹಾವೇರಿ: ಕನ್ನಡ ಸಾಹಿತ್ಯವು ಎಂತಹ ಕಠೋರ ಮನಸ್ಸಿನವರನ್ನೂ ಮನುಷ್ಯರನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ, ಕೈದಿಗಳು ಜೈಲಿನಲ್ಲಿರುವ ಅವಧಿಯನ್ನು ಪರಿವರ್ತನೆಗೆ ಬಳಸಿಕೊಳ್ಳಬೇಕು. ಇದಕ್ಕಾಗಿ ಪುಸ್ತಕಗಳನ್ನು ಓದಿರಿ ಜತೆಗೆ ಅನುಭವಗಳನ್ನು ದಾಖಲಿಸಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ಕೈದಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ತಾಲೂಕಿನ ಕೆರಿಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗಾಗಿ ಹಮ್ಮಿಕೊಂಡಿರುವ ಮೂರು ದಿನಗಳ ಕೈದಿಗಳಿಗಾಗಿ ಸಾಹಿತ್ಯ ಕಮ್ಮಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಂಪ, ಕುಮಾರವ್ಯಾಸ, ಕನಕದಾಸ, ಕುವೆಂಪು, ಬೇಂದ್ರೆ, ಸೇರಿದಂತೆ ಹಲವರು ಮಾನವೀಯ ಮೌಲ್ಯಗಳನ್ನು ತಮ್ಮ ಕೃತಿಗಳ ಮೂಲಕ ಬಿತ್ತಿದರು. ಕನ್ನಡದ ಆದಿಕವಿ ಪಂಪ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಸಾರಿದರು. ಮನುಷ್ಯರಾದ ನಾವೆಲ್ಲರೂ ಒಂದು ಎಂದು ಹೇಳಿದರು. ಅಂಥವರ ಕೃತಿಗಳನ್ನು ಓದುವ ಮೂಲಕ ಮಾನವೀಯತೆ ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಹಾವೇರಿ ಜಿಲ್ಲೆಯು ಶರೀಫ, ಸರ್ವಜ್ಞ, ಕನಕದಾಸರ ಮೂಲಕ ಪ್ರಸಿದ್ಧವಾಗಿದೆ. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು 500 ವರ್ಷಗಳ ಹಿಂದೆಯೇ ಹೇಳಿದ್ದಾರೆ. ಆದರೆ, ಇಂದಿಗೂ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಅಲ್ಲದೇ ಹೆಣ್ಣಿಗಾಗಿ, ಆಸ್ತಿಗಾಗಿ, ಅಧಿಕಾರಕ್ಕಾಗಿ ಹಲವರು ಜಗಳವಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ದಾವಣೆಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್ ರವಿಕಾಂತೇಗೌಡ ಮಾತನಾಡಿ, ಕೈದಿಗಳಿಗೆ ಸಾಹಿತ್ಯ ಕಮ್ಮಟ ಏರ್ಪಡಿಸಿರುವುದು ವಿಶಿಷ್ಟ ಕಲ್ಪನೆಯಾಗಿದೆ. ಸಾಹಿತ್ಯವು ಎಲ್ಲರನ್ನೂ ತಲುಪಬೇಕೆಂಬ ಉದ್ದೇಶದ ಈ ಕಮ್ಮಟವು ಸಾರ್ಥಕವಾಗಬೇಕು. ಈ ಮೂಲಕ ಸಾಹಿತ್ಯದಿಂದ ಬಿಡುಗಡೆಯಾಗಬೇಕು ಎಂದರು.
ಕಾನೂನು ಪಾಲಿಸದವರನ್ನು ಸಮಾಜದಿಂದ ದೂರ ಮಾಡಿ ಜೈಲಿಗೆ ಕಳಿಸಲಾಗುತ್ತದೆ. ನಿಯಂತ್ರಣ ಕಳೆದುಕೊಂಡು ಕಾನೂನಿಗೆ ವಿರುದ್ಧವಾಗಿ ವರ್ತಿಸಿದಾಗ ಜೈಲು ಕಾಣುತ್ತೀರಿ. ಇದಕ್ಕಾಗಿ ಕಾನೂನಿನ ಪರವಾಗಿ ನಿಮ್ಮ ನಡೆ ಇರಲಿ. ಏಕೆಂದರೆ ಅಪರಾಧ- ಅಪರಾಧಿ ನಡುವಿನ ಸಂಬಂಧ ವಿಷವರ್ತುಲ. ಇಂಥ ವಿಷವರ್ತುಲದಿಂದ ಹೊರಬರಲು ಸಾಹಿತ್ಯದ ಓದು ನೆರವಾಗುತ್ತದೆ ಎಂದು ತಿಳಿವಳಿಕೆ ಹೇಳಿದರು.
ಸಾಹಿತ್ಯಕ್ಕೆ ಕೆಡುಕನ್ನು ಆಚೆಗೆ ನೂಕಿ ಒಳ್ಳೆಯದನ್ನು ಮಾಡುವ ಶಕ್ತಿಯಿದೆ. ಜತೆಗೆ ಸಮಾಜದ ವಿರುದ್ಧ ಹೋಗದಂತೆ ತಡೆಯುವ ಶಕ್ತಿ ಇದೆ. ಹಾಗೆಯೇ ಅಪರಾಧ ಪ್ರಜ್ಞೆಯಿಂದ ಹೊರಬರಲು ಸಾಹಿತ್ಯ ನೆರವಾಗುತ್ತದೆ. ಇದಕ್ಕಾಗಿ ಪುಸ್ತಕಗಳನ್ನು ಓದಿರಿ ಎಂದರು.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ ಶಿರಕೋಳ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವ ಡಾ.ಸಿ.ಟಿ ಗುರುಪ್ರಸಾದ, ಕಾರಾಗೃಹದ ಸಹಾಯಕ ಅಧೀಕ್ಷಕ ಖಿಲಾರಿ, ಇತರರು ಉಪಸ್ಥಿತರಿದ್ದರು.
ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ ಸ್ವಾಗತಿಸಿ, ನಿರೂಪಿಸಿದರು.
ಕೋಟ್:
ಅಪರಾಧ, ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲಾಗುತ್ತದೆ. ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ‘ನಾವು ಸಾಹಿತ್ಯ ಓದದಿದ್ದರೆ ಕ್ರಿಮಿನಲ್ ಆಗುತ್ತಿದ್ದೆವು’ ಎಂದು ಸಿಟ್ಟಿನ ಮನುಷ್ಯರಾಗಿದ್ದ ನನ್ನ ತಂದೆ ಹಾಗೂ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಹೇಳುತ್ತಿದ್ದರು. ಸಿಟ್ಟಿನ ನಿಯಂತ್ರಣಕ್ಕೆ ಮತ್ತು ಬದುಕು ಕಟ್ಟಿಕೊಳ್ಳಲು ಸಮೃದ್ಧವಾದ ಸಾಹಿತ್ಯ ಓದಿರಿ. ಆತ್ಮಾವಲೋಕನ ಮಾಡಿಕೊಳ್ಳಿ.
- ಡಾ.ಬಿ.ಆರ್.ರವಿಕಾಂತೇಗೌಡ, ಪೂರ್ವ ವಲಯ ಐಜಿಪಿ