

ಹಾವೇರಿ: ಇಲ್ಲಿನ ಕೆರಿಮತ್ತಿಹಳ್ಳಿಯ ಸಬ್ ಜೈಲ್‌ನಲ್ಲಿ ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣ ಏಳು ಆರೋಪಿಗಳಿಗೆ ರಾಜಾತಿಥ್ಯ ದೊರೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪುಂಡರ ಹಾವಳಿ ಕುರಿತು ಸಬ್ ಜೈಲಲ್ಲಿದ್ದು ಹೊರ ಬಂದಿರುವ ಆರೋಪಿಯೊಬ್ಬರು ಪ್ರತ್ಯಕ್ಷ ಘಟನೆಗಳ ಕುರಿತು ವಿವರಿಸಿದ್ದಾರೆ. ಗ್ಯಾಂಗ್ ರೇಪ್ ಆರೋಪಿಗಳು 17 ತಿಂಗಳ ಬಳಿಕ ಜಾಮೀನು ಪಡೆಯುತ್ತಿದ್ದಂತೆ ಹೊರ ಬಂದು ರೋಡ್ ಶೋ ಮಾಡುವ ಮೂಲಕ ಮತ್ತೆ ಏಳು ದಿನ ಜೈಲು ಪಾಲಾಗಿದ್ದಾರೆ. ಇಷ್ಟಾದರೂ ಜೈಲಲ್ಲಿ ಮತ್ತೆ ಬಾಲ ಬಿಚ್ಚಿರುವ ಆರೋಪಿಗಳು, ಜೈಲಲ್ಲಿ ದರ್ಬಾರ್ ಶುರು ಮಾಡಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ದಲಿತ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇತ್ತೀಚೆಗೆ ಜೈಲಿನಿಂದ ಜಾಮೀನು ಪಡೆದು ಹೊರಬಂದಿರುವ ಬಸವರಾಜ ಆರೋಪಿಸಿದ್ದಾರೆ. ಜೈಲಿನಲ್ಲಿ ಗ್ಯಾಂಗ್ ರೇಪ್ ಆರೋಪಿತರು ಆಡಿದ್ದೇ ಆಟ ಆಗಿದೆ. ಅವರಿಗೆ ಜೈಲು ಸ್ವರ್ಗದಂತಿದೆ. ಜೈಲಿನ ಒಳಗೆ ಯಾರೋ ಹೊಸಬರು ಬಂದರೆ ಯಾವ ಕೇಸ್ ಎಂಬ ವಿವರವನ್ನು ಅವರ ಮುಂದೆ ಹೇಳಬೇಕು. ಇಲ್ಲದಿದ್ದರೆ ಹಲ್ಲೆ ಮಾಡುತ್ತಾರೆ. ಅವರು ಹೇಳಿದ ಕೆಲಸವನ್ನು ಉಳಿದವರು ಮಾಡಬೇಕಿದೆ ಎಂದು ದೂರಿದ್ದಾರೆ. ಈ ಕುರಿತು ಸರ್ಕಾರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ.
ಬಿರ‌್ಯಾನಿ ಸಪ್ಲೈ, ಹಫ್ತಾ ವಸೂಲಿ !
ಗ್ಯಾಂಗ್ ರೇಪ್ ಆರೋಪಿಗಳಿಗೆ ಜೈಲಿನಲ್ಲೇ ಬಿಸಿಬಿಸಿ ಬಿರ‌್ಯಾನಿ, ಗುಟಕಾ ಸರಬರಾಜು ಆಗುತ್ತದೆ. ಜೈಲಿನಲ್ಲೇ ಕುಳಿತು ಖೈದಿಗಳಿಂದ 300 ರೂ.ನಂತೆ ಹಫ್ತಾ ವಸೂಲಿ ಮಾಡುತ್ತಾರೆ. ಕಾರಾಗೃಹ ಸಿಬ್ಬಂದಿಗೆ ಏಕವಚನದಲ್ಲಿ ನಿಂದಿಸುತ್ತಾರೆ. ಸಹ ಖೈದಿಗಳಿಗೆ ‘ನೀನು ಅಂಬೇಡ್ಕರ್ ಹೆಸರು, ಸಂವಿಧಾನ ಎಂದು ಹೇಳಿದರೆ ಹೆದರುತ್ತೇವಾ ? ಡಿಎಸ್‌ಎಸ್ ಬಂದರೂ ಹೆಸರಿಸುತ್ತೇವೆ. ಈ ಸರ್ಕಾರ ಇರುವುದು ನಮ್ಮ ಸಲುವಾಗಿ’ ಎಂದು ಬೆದರಿಸುತ್ತಾರೆ. ದೌರ್ಜನ್ಯ ಮಾಡುತ್ತಾರೆ. ಬಂಧೀಖಾನೆ ಕೊಠಡಿಯಿಂದ ಹೆಚ್ಚಾಗಿ ಹೊರಗೆ ಕಾಲ ಕಳೆಯುತ್ತಾರೆ. ಇದಕ್ಕೆ ಜೈಲು ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ ಎಂದು ಬಸವರಾಜ ಗಂಭೀರ ಆರೋಪ ಮಾಡಿದ್ದಾರೆ. ಇಂಥವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋಟ್:
ಗ್ಯಾಂಗ್ ರೇಪ್ ಆರೋಪಿಗಳಿಗೆ ಯಾವುದೇ ರೀತಿಯ ಆತಿಥ್ಯ ನೀಡುತ್ತಿಲ್ಲ. ಗುಟಕಾ ಇರಲಿ ತಂಬಾಕು ಸಹ ಯಾರಿಗೂ ಸಿಗುವುದಿಲ್ಲ. ಯಾರ ಮೇಲೆಯೂ ಹಲ್ಲೆ ನಡೆದಿಲ್ಲ. ಕಾರಾಗೃಹದ ಕುರಿತ ಆರೋಪಗಳು ಸುಳ್ಳು.
- ನಾಗರತ್ನಾ ವೈ.ಡಿ., ಜೈಲ್ ಸೂಪರಿಡೆಂಟ್, ಜಿಲ್ಲಾ ಕಾರಾಗೃಹ