ಬಾಕಿ ತಾಲೂಕುಗಳ ಬಗರಹುಕುಂ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿ; ನೀರಿನ ಸಮಸ್ಯೆಗೆ ತ್ರಿಸದಸ್ಯ ಸಮಿತಿ ಪರಿಶೀಲಿಸಿ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಶಾಲ ಆರ್. ಸೂಚನೆ

16 HVR 6
Published on

ಹಾವೇರಿ: ಬಗರಹುಕುಂ ಸಮಿತಿಗಳ ರಚನೆಗೆ ಜಿಲ್ಲೆಯ ಮೂರು ತಾಲೂಕುಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ ರಾಣೇಬೆನ್ನೂರ ತಾಲೂಕಿನ ಸಮಿತಿಗೆ ಅನುಮೋದನೆ ದೊರೆತಿದೆ. ಉಳಿದ ತಾಲೂಕುಗಳ ಸಮಿತಿಗಳ ರಚನೆಗೆ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿ (ವಿತ್ತೀಯ ಸುಧಾರಣೆ) ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ ಆರ್. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯ ಬರ ನಿರ್ವಹಣೆ ಹಾಗೂ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ಅವರು, ಇ-ಜನ್ಮ ತಂತ್ರಾಂಶ ಹೊರತುಪಡಿಸಿ ವಿವಿಧ ಮರಣ ದಾಖಲೆ ಬಳಸಿಕೊಂಡು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಮರಣ ಹೊಂದಿರುವ ಫಲಾನುಭವಿಗಳ ಪಿಂಚಣಿ ರದ್ದುಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟಾರೆ 17,434 ಮರಣ ಹೊಂದಿದವರ ಪಿಂಚಣಿಯನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬರಗಾಲ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಭಿಯಂತರರು ಒಳಗೊಂಡ ತಾಲೂಕು ಮಟ್ಟದ ತ್ರಿಸದಸ್ಯ ಸಮಿತಿ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ನೀರಿನ ಕೊರತೆ ಉಂಟಾದಲ್ಲಿ ಖಾಸಗಿ ಕೊಳವೆಬಾವಿ ಪಡೆಯಬೇಕು. ಅಂತಿಮವಾಗಿ ಅನಿವಾರ್ಯ ಎನಿಸಿದರೆ ತ್ರಿಸದಸ್ಯ ಕಮಿಟಿ ಪರಿಶೀಲಿಸಿ ಟ್ಯಾಂಕರ್ ಬಳಸಿ ಎಂದರು.
ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ಬರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಅನುದಾನದ ಕೊರತೆ ಇಲ್ಲ. ಆಯಾ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಯವರ ಪಿಡಿ ಖಾತೆಯಲ್ಲಿ 18.65 ಕೋಟಿ ರೂ. ಅನುದಾನ ಲಭ್ಯವಿದೆ ಎಂದರು.
ಜನವರಿಯೊಳಗೆ ಕಂದಾಯ ಗ್ರಾಮಗಳ ಘೋಷಣೆಗೆ ಸಿದ್ಧತೆ ಕೈಗೊಳ್ಳಲಾಗುವುದು. ಅಭಿಲೇಖನಾಲಯ ಗಣೀಕರಣಗೊಳಿಸಲು ಸರ್ಕಾರ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಹಾನಗಲ್ಲ ತಹಶೀಲ್ದಾರ್ ಕಚೇರಿಯನ್ನು ಪೈಲೆಟ್ ಯೋಜನೆಗೆ ಆಯ್ಕೆ ಮಾಡಿದೆ. ಗಣೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಇ-ಆಫೀಸ್ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಉಪ ವಿಭಾಗಾಧಿಕಾರಿ ಚನ್ನಪ್ಪ, ತಹಶೀಲ್ದಾರ್ ಶಂಕರ ಜಿ., ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ಎಲ್. ಹಾಗೂ ವಿವಿಧ ತಾಲೂಕುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸವಣೂರ ಉಪವಿಭಾಗಾಧಿಕಾರಿ ಮಹಮ್ಮದ್ ಖಿಜರ್, ಗ್ರಾಮೀಣ ನೀರು ಸರಬರಾಜು ಕಾರ್ಯ ನಿರ್ವಾಹಕ ಅಭಿಯಂತರ ಜಯರಾಮ ನಾಯಕ, ತಹಶೀಲ್ದಾರರು, ತಾಪಂ ಇಒಗಳು, ಇತರರು ಭಾಗವಹಿಸಿದ್ದರು.
ಜನವರಿಗೆ ಹಿಮ್ಸ್ ಪೂರ್ಣ
ಜನವರಿ 1ರೊಳಗೆ ವೈದ್ಯಕೀಯ ಕಾಲೇಜ್ ಆಡಳಿತ ವಿಭಾಗ ಹಾಗೂ ವಿದ್ಯಾರ್ಥಿ ನಿಲಯ ಕಟ್ಟಡ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವಿಶಾಲ ತಿಳಿಸಿದರು.
ವಾರದೊಳಗೆ ಇತ್ಯರ್ಥಪಡಿಸಿ
ಹಿರೇಕೆರೂರ, ರಟ್ಟಿಹಳ್ಳಿ, ಸವಣೂರಿನಲ್ಲಿ ಆರ್.ಟಿ.ಸಿ. ಮ್ಯೂಟೇಷನ್ ಹಾಗೂ ಕಂದಾಯ ಪ್ರಕರಣಗಳ ವಿಲೇವಾರಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವುದಕ್ಕೆ ವಿಶಾಲ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಒಂದು ವಾರದೊಳಗಾಗಿ ಬಾಕಿ ಪ್ರಕರಣಗಳ ಇತ್ಯರ್ಥಪಡಿಸಲು ಸವಣೂರ ಹಾಗೂ ಹಾವೇರಿ ಉಪವಿಭಾಗಾಧಿಕಾರಿಗಳಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net