ಆಸ್ಪತ್ರೆಯಿಂದ ಓಡಿ ಬಂದ ರೋಗಿಗಳು, ಬಾಣಂತಿಯರು; ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಿಂದ ಕೆಲಕಾಲ ಆತಂಕ

14 HVR 6 A
Published on

ಹಾವೇರಿ: ಇಲ್ಲಿನ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಬುಧವಾರ ಆಕ್ಸಿಜನ್ ಸಿಲಿಂಡರ್ ಲೀಕೇಜ್ ಹಾಗೂ ದೊಡ್ಡ ಶಬ್ದದಿಂದ ಗಾಬರಿಗೊಂಡ ರೋಗಿಗಳು, ಬಾಣಂತಿಯರು ಆತಂಕಗೊಂಡು ಹಸುಗೂಸಿನೊಂದಿಗೆ ಆಸ್ಪತ್ರೆಯಿಂದ ಎದ್ದು ಬಿದ್ದು ಓಡಿ ಹೊರ ಬಂದ ಪ್ರಸಂಗ ಬುಧವಾರ ನಡೆದಿದೆ.
ಆಸ್ಪತ್ರೆ ಮುಂಭಾಗದಲ್ಲಿನ ತುರ್ತು ಚಿಕಿತ್ಸಾ ವಿಭಾಗ ಸಿಲಿಂಡರ್‌ನ ಮುಂಭಾಗ ತ್ತಡದಿಂದ ಒಡೆದ ಪರಿಣಾಮ ಭಾರಿ ಶಬ್ದ ಉಂಟಾಗಿದೆ. ಆಕ್ಸಿಜನ್ ಲೀಕೇಜ್ ಆಗುವ ಸದ್ದು ಹೊರಬಂದಿದೆ. ಇದರಿಂದ ಅಕ್ಕಪಕ್ಕದಲ್ಲಿದ್ದ ಜನರು, ರೋಗಿಗಳು ಭಯಭೀತರಾಗಿದ್ದಾರೆ. ಏನಾಯಿತು ಎಂದು ಗೊತ್ತಾಗದೇ, ‘ಸಿಲಿಂಡರ್ ಸ್ಪೋಟವಾಗಿದೆ’ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆತಂಕದಿಂದ ರೋಗಿಗಳು, ಸಂಬಂದಿಕರು ಎದ್ದು ಬಿದ್ದು ಹೊರಬಂದಿದ್ದಾರೆ.
ಈ ವಿಷಯ ಕಾಡ್ಗಿಚ್ಚಿನಂತೆ ಆಸ್ಪತ್ರೆಗೆಲ್ಲ ಹಬ್ಬಿದೆ. ಘಟನೆ ತಿಳಿಗೊಳಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿದರೂ ಸಾಧ್ಯವಾಗಿಲ್ಲ. ಜನ ಮತ್ತಷ್ಟು ಆತಂಕದಿಂದ ಕಂಗಾಲಾಗಿದ್ದರು. ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿದ್ದ ಗರ್ಭಿಣಿ, ಬಾಣಂತಿಯರೂ ಹಸುಗೂಸನ್ನು ಎತ್ತಿಕೊಂಡು ಹೊರಗೆ ಓಡಿ ಬಂದಿದ್ದಾರೆ.
ಕೆಲ ರೋಗಿಗಳು ಚಿಕಿತ್ಸೆ ಪಡೆಯುವುದನ್ನು ಕೈಬಿಟ್ಟು ಹೊರಗೆ ಬಂದಿದ್ದಾರೆ. ಕೆಲವರು ಕೈಯಲ್ಲಿ ಮೂತ್ರದ ಬಾಟಲಿ ಹಿಡಿದುಕೊಂಡು ಹೊರ ಬಂದಿದ್ದು ಕಂಡು ಬಂತು. ಕೆಲ ಸಮಯದ ಬಳಿಕ ವಿಷಯ ತಿಳಿದ ನಂತರ ಪರಿಸ್ಥಿತಿ ತಿಳಿಯಾಗಿದೆ.
ಯಾವುದೇ ಅವಘಡ ಸಂಭವಿಸಿಲ್ಲ
ತುರ್ತು ಚಿಕಿತ್ಸಾ ವಿಭಾಗದ ಸಣ್ಣ ಆಕ್ಸಿಜನ್ ಸಿಲಿಂಡರ್‌ನ ಪ್ಲಾಸ್ಟಿಕ್ ನಟ್ ಸೋರಿಕೆಯಾಗಿದೆ. ಈ ವೇಳೆ ಶಬ್ದ ಉಂಟಾದ ಕಾರಣ ಗಾಬರಿಗೊಂಡು ಆಸ್ಪತ್ರೆಯಿಂದ ಹೊರಬಂದಿದ್ದರು. ಯಾವುದೇ ಅವಘಡ ನಡೆದಿಲ್ಲ. ಬಳಿಕ ಎಲ್ಲರಿಗೂ ವಿಷಯ ತಿಳಿಸಿ ಒಳಗೆ ಕಳುಹಿಸಲಾಯಿತು. 13 ವರ್ಷಗಳ ಹಿಂದೆಯೂ ಹೀಗೆ ಆಗಿತ್ತು. ತಂತ್ರಜ್ಞರು ಇವುಗಳನ್ನು ನಿರ್ವಹಣೆ ಮಾಡುತ್ತಾರೆ. ಉಳಿದ ಸಿಲಿಂಡರ್ ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net