ಹಾವೇರಿ: ಮನೆ ಕೆಲಸದ ಮಹಿಳೆ ಜತೆಗೆ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಕುರಿತು ಇಲ್ಲಿನ ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ.ಪರಸಪ್ಪ ಚುರ್ಚಿಹಾಳ ವಿರುದ್ಧ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
33 ವರ್ಷದ ಮಹಿಳೆ ಜಿಲ್ಲಾಸ್ಪತ್ರೆ ವೈದ್ಯರ ವಸತಿ ಗೃಹದ ಕೆಲ ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದರು. ಚುರ್ಚಿಹಾಳ ಅವರ ಮನೆಯಲ್ಲೂ ಮನೆಗೆಲಸಕ್ಕೆ ಹೋಗುತ್ತಿದ್ದರು. ಫೆ.13ರಂದು ಬೆಳಗ್ಗೆ ಚುರ್ಚಿಹಾಳ ಮನೆಗೆ ಕೆಲಸಕ್ಕೆ ಹೋದಾಗ, ‘ನನ್ನ ಸೊಂಟಕ್ಕೆ ಕೈಹಾಕಿ, ಸೀರೆ ಹಿಡಿದು ಎಳೆದಾಡಿದರು. ನೀನು ಮಾದರ ಜಾತಿಯವಳು. ನಾನು ಜಿಲ್ಲಾಸ್ಪತ್ರೆಯ ಡಾಕ್ಟರ್. ನಾನು ಹೇಳಿದಂಗ ಜಿಲ್ಲಾಸ್ಪತ್ರೆ ಕೇಳತೈತಿ. ನೀನೂ ನಾನು ಹೇಳಿದಂಗ ಕೇಳಿಕೊಂಡು ಇರಬೇಕು ಎಂದು ಕಪಾಳಕ್ಕೆ ಹೊಡೆದರು. ನಂತರ ನಾನು ಅವರ ಕೈಯಿಂದ ತಪ್ಪಿಸಿಕೊಂಡು ಊರಿಗೆ ಹೋದೆ’ ಎಂದು, ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೊಂದ ಮಹಿಳೆ ಮಹಿಳಾ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಹಾವೇರಿ ಡಿವೈಎಸ್‌ಪಿ ಎಂ.ಎಸ್ ಪಾಟೀಲ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸ್ಥಳ ಮಹಜರು ಮಾಡಿ, ತನಿಖೆ ಮುಂದುವರಿಸಲಾಗಿದೆ ಎಂದು ಎಸ್‌ಪಿ ಅಂಶುಕುಮಾರ ತಿಳಿಸಿದ್ದಾರೆ.
ಮೂರ್ನಾಲ್ಕು ತಿಂಗಳ ಹಿಂದೆಯೇ ಆ ಮಹಿಳೆ ಕೆಲಸ ಬಿಟ್ಟಿದ್ದಾರೆ. ಆಕೆಯ ಸಹೋದರ, ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಫಕ್ಕೀರೇಶನನ್ನು ಬೇರೆ ವಿಭಾಗಕ್ಕೆ ಹಾಕಿದ್ದಕ್ಕೆ ದ್ವೇಷದಿಂದ ಹೀಗೆ ಮಾಡಿದ್ದಾರೆ ಎಂದು ಈ ಕುರಿತು ಪತ್ರಿಕೆಗೆ ಡಾ.ಚುರ್ಚಿಹಾಳ ಪ್ರತಿಕ್ರಿಯಿಸಿದ್ದಾರೆ.
ಸೇವೆಯಿಂದ ವಜಾ ಮಾಡಲು ಮನವಿ
ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ನೊಂದ ಮಹಿಳೆ ಹಾಗೂ ಆಕೆಯ ಕುಟುಂಬದವರು ಪ್ರತಿಭಟನೆ ನಡೆಸಿದರು. ಡಾ.ಪರಸಪ್ಪ ಚುರ್ಚಿಹಾಳ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಮನವಿ ಮಾಡಿದರು.