ಜೋಡಿ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Judgement
Published on

ಹಾವೇರಿ: ಜಮೀನಿನ ವಿಷಯವಾಗಿ ಕೊಡಲಿಯಿಂದ ಹೊಡೆದು ಇಬ್ಬರು ಮರಣ ಹೊಂದಲು ಕಾರಣವಾಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1.05 ಲಕ್ಷ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್ ಅವರು ತೀರ್ಪು ನೀಡಿದ್ದಾರೆ.
ಹಾನಗಲ್ಲ ತಾಲೂಕು ಗುಡ್ಡದಮತ್ತಿಹಳ್ಳಿ ಗ್ರಾಮದ ಬಸವರಾಜ ನಾಗಪ್ಪ ಕುರುಬರ ಶಿಕ್ಷೆಗೀಡಾದ ಅಪರಾಧಿ. ಈತನ ಸಹೋದರನ ಪುತ್ರ ಮಾಲತೇಶ ಹಾಗೂ ಆತನ ಮಗ ಚಂದ್ರು ಮೃತಪಟ್ಟಿರುವವರು.
ಮೃತ ಮಾಲತೇಶನಿಗೆ ತಂದೆ-ತಾಯಿ ನೋಡಿಕೊಳ್ಳಲು ಗುಡ್ಡದಮತ್ತಿಹಳ್ಳಿ ಗ್ರಾಮದ ರಿ.ಸ.ನಂ. 108/1ರಲ್ಲಿ ಅರ್ಧ ಎಕರೆ ಜಮೀನು ಹೆಚ್ಚಿಗೆ ನೀಡಲಾಗಿತ್ತು. ಬಸವರಾಜ ಕುರುಬರ ಈತನು ಅರ್ಧ ಎಕರೆ ಜಮೀನು ತನಗೆ ಬಿಟ್ಟು ಕೊಡುವಂತೆ ಪದೇಪದೆ ತಂಟೆ ಮಾಡುತ್ತಿದ್ದ. 25 ನವೆಂಬರ್ 2018ರಂದು ರಾತ್ರಿ ಮಾಲತೇಶ ಹಾಗೂ ಅವನ ಮಗ ಚಂದ್ರು ಮೇಲೆ ಬಸವರಾಜ ಕೊಡಲಿಯಿಂದ ಬಲವಾಗಿ ಹೊಡೆದು ಗಾಯಪಡಿಸಿದ್ದ. ಆಗ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಾನಗಲ್ಲ ವೃತ್ತದ ಅಂದಿನ ತನಿಖಾಧಿಕಾರಿ ಆರ್.ಎಚ್.ಕಟ್ಟಿಮನಿ ಅವರು ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್ ಅವರು ಬುಧವಾರ ಈ ಮೇಲಿನಂತೆ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಎಂ. ಗೆಜ್ಜಿಹಳ್ಳಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net