

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಬಾಲಕಿಯರ ಮೇಲಿನ ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ, ಕಾಯ್ದೆ ಜಾರಿಯಾದ ಮೇಲೂ ಜಿಲ್ಲೆಯಲ್ಲಿ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣ ನಿಂತಿಲ್ಲ. 2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 46 ಬಾಲಗರ್ಭಿಣಿಯರು ಬೆಳಕಿಗೆ ಬಂದಿರುವುದೇ ಇದಕ್ಕೆ ಸಾಕ್ಷಿ. ಆಟ-ಪಾಠ ಎಂದುಕೊಂಡು ನಲಿಯಬೇಕಾದ ಬಾಲಕಿಯರು ತಾಯ್ತನ ಅನುಭವಿಸುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ.
ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ 2024 ಜನವರಿಯಿಂದ ಡಿಸೆಂಬರ್ವರೆಗೆ 46 ಬಾಲ ಗರ್ಭಿಣಿಯರು ಬೆಳಕಿಗೆ ಬಂದಿದ್ದಾರೆ. ಅಲ್ಲದೆ, ಇದರಲ್ಲಿ 19 ಬಾಲ ಗರ್ಭಿಣಿಯರು ಬಾಲ್ಯ ವಿವಾಹಕ್ಕೆ ಒಳಗಾಗಿದ್ದರೆ, 27 ಗರ್ಭಿಣಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಎಂಬುದು ಕಳವಳಕಾರಿ ಸಂಗತಿ. ಇದು ಸರ್ಕಾರಿ ದಾಖಲೆಗಳ ಪ್ರಕಾರ ಬೆಳಕಿಗೆ ಬಂದ ಪ್ರಕರಣಗಳಾಗಿದ್ದು, ಬೆಳಕಿಗೆ ಬಾರದಿರುವ ಪ್ರಕರಣಗಳು ಇನ್ನೆಷ್ಟೋ.
ಜಿಲ್ಲೆಯಲ್ಲಿ 19 ಬಾಲಕಿಯರು ಬಾಲ್ಯ ವಿವಾಹದ ಕಾರಣದಿಂದ ಗರ್ಭಿಣಿಯರಾಗಿದ್ದರೆ, ಪ್ರೇಮ ವಿವಾಹ, ಲಿವ್ ಇನ್ ರಿಲೇಶನ್ ಶಿಫ್, ಲೈಂಗಿಕ ದೌರ್ಜನ್ಯ, ಲೈಂಗಿಕ ತಿಳಿವಳಿಕೆ ಕೊರತೆ, ಜೀವನಶೈಲಿ ಸೇರಿ ನಾನಾ ಕಾರಣಗಳಿಂದ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆಯಾಗಿದೆ.
ಬಾಲಕಿಯರು ಗರ್ಭ ಧರಿಸಿದ ವೇಳೆ ಗರ್ಭಪಾತ, ಅವಧಿ ಪೂರ್ವ ಪ್ರಸವ, ದೈಹಿಕ ನ್ಯೂನತೆ ಹೊಂದಿರುವ ಶಿಶು ಜನನ, ಬಾಲಕಿಯ ದೈಹಿಕ ಬೆಳವಣಿಗೆ ಕುಂಠಿತ ಸೇರಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಬಾಲ್ಯದಲ್ಲೇ ಗರ್ಭ ಧರಿಸಿದರೆ ಬಾಲಕಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಕಂಡು ಬರುತ್ತಿವೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತಹೀನತೆ, ಅಧಿಕ ರಕ್ತದೊತ್ತಡ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿಯಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆಯಾಗಿದೆ. ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ತ್ವರಿತವಾಗಿ ಕ್ರಮಕ್ಕೆ ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಪ್ರಕರಣ ಬೆಳಕಿಗೆ ಬಂದ 46ರ ಪೈಕಿ 45 ಪ್ರಕರಣದ ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆದರೆ, ಒಂದು ಪ್ರಕರಣದಲ್ಲಿ ಪಾಲಕರು ಬಾಲಕಿಗೆ ಹುಡುಗನ ಕುರಿತು ಮಾಹಿತಿ ನೀಡದೆ ಮದುವೆ ಮಾಡಿದ್ದಾರೆ. ಅಲ್ಲದೆ, ಆತನಿಂದ ತಾಳಿ ಕಟ್ಟಿಸಿಕೊಂಡ ಬಾಲಕಿ ಮರಳಿ ಆತನ ಕಡೆ ತಿರುಗಿ ನೋಡಿಲ್ಲ. ಅದೇ ರೀತಿ ಮದುವೆ ಮಾಡಿಕೊಂಡ ಹುಡುಗ ಕೂಡ ಬಾಲಕಿ ಜತೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಹೀಗಾಗಿ ಇದೊಂದು ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ದಾಖಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲ ಗರ್ಭಿಣಿಯರ ಸಂಖ್ಯೆ ಇಳಿಕೆಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಬೇಕು. ಬೇಟಿ ಬಚಾವೋ ಬೇಟಿ ಪಡಾವೋ ಇನ್ನೂ ಪರಿಣಾಮಕಾರಿಯಾಗಬೇಕು. ಪಾಲಕರು ಸಹ ತಮ್ಮ ಮಕ್ಕಳು ಶಾಲೆಯಿಂದ ಬಂದ ಮೇಲೆ ಅವರ ಚಲನವಲನಗಳ ಮೇಲೆ ನಿಗಾ ಇಡಬೇಕು. ಕಾನೂನು ಬಗ್ಗೆ ಪಾಲಕರು ಸೇರಿ ಪ್ರತಿಯೊಬ್ಬರೂ ಅರಿತುಕೊಂಡಾಗ ಮಾತ್ರ ಬಾಲ ಗರ್ಭಿಣಿಯರ ಸಂಖ್ಯೆ ನಿಯಂತ್ರಿಸಲು ಸಾಧ್ಯ. | ಅನ್ನಪೂರ್ಣ ಸಂಗಳದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಹಾವೇರಿ