ಸಮಸ್ಯೆಗಳ ನೆಪದಲ್ಲಿ ಸಾಧನೆಯಿಂದ ವಿಮುಖರಾಗದಿರಿ; ಸಿನಿಮಾ ನಿರ್ದೇಶಕಿ ಅರುಣಾರಾಜೇ ಪಾಟೀಲ ಹೇಳಿಕೆ

29 HVR 5
Published on

ಹಾವೇರಿ: ಸಾಂಪ್ರದಾಯಿಕ ಕಟ್ಟುಪಾಡುಗಳು, ಕೌಟುಂಬಿಕ ಸಮಸ್ಯೆಗಳು, ಸವಾಲುಗಳ ನೆಪದಲ್ಲಿ ಮಹಿಳೆಯರು ಸಾಧನೆಗಳಿಂದ ವಿಮುಖರಾಗಬಾರದು ಎಂದು ಸಿನಿಮಾ ನಿರ್ದೇಶಕಿ, ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲರ ಪುತ್ರಿ ಅರುಣಾರಾಜೇ ಪಾಟೀಲ ಹೇಳಿದರು.
ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಸಾಹಿತಿ ಕಲಾವಿದರ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಆಪ್ತ ಸಂವಾದದಲ್ಲಿ ಮಾತನಾಡಿದ ಅವರು, ಸವಾಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮಹಿಳೆಯರು ಸಾಧನೆಯತ್ತ ಗಮನ ಹರಿಸಬೇಕು. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವಳು. ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲರ ಮಗಳು ಎಂಬುದು ಮತ್ತೊಂದು ಹೆಮ್ಮೆ. ಆರ್ಥಿಕವಾಗಿ ಸುಭದ್ರ ಇದ್ದರೂ ಬಾಲಿವುಡ್ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಅವಮಾನಗಳು ನನ್ನನ್ನು ಸಾಧನೆಯತ್ತ ಕೊಂಡೊಯ್ದವು ಎಂದರು.
ಅನಾರೋಗ್ಯದಿಂದ ಮೃತಪಟ್ಟ ಒಂಬತ್ತು ವರ್ಷದ ಮಗಳು, ವಿಚ್ಛೇದನ ಬಯಸಿದ ಪತಿ, ಜೀವನದಲ್ಲಿ ನೆಲೆ ನಿಲ್ಲಲು ಪರದಾಡುತ್ತಿದ್ದ ಸಂದರ್ಭದಲ್ಲಿ ನನ್ನ ಆಯ್ಕೆ ಸ್ವಾಭಿಮಾನ ಮತ್ತು ಸಾಧನೆ ಆಗಿತ್ತು. ಅದಕ್ಕಾಗಿ ಹಗಲಿರುಳು ದುಡಿದೆ. ಏಳು ಸಿನಿಮಾಗಳಿಗೆ ಸಾಹಿತ್ಯ, ಒಂಬತ್ತು ಸಿನಿಮಾಗಳಿಗೆ ನಿರ್ದೇಶನ, ಎಂಟು ಸಿನಿಮಾಗಳಿಗೆ ಸಂಕಲನ ಮಾಡಿದೆ. ಆಗ ಆರು ರಾಷ್ಟ್ರೀಯ ಪ್ರಶಸ್ತಿಗಳು ನನ್ನನ್ನು ಮತ್ತಷ್ಟು ಜವಾಬ್ದಾರಿಯತ್ತ ಕೊಂಡೊಯ್ದವು ಎಂದರು.
ಇದೇ ಸಂದರ್ಭದಲ್ಲಿ ಅರುಣಾರಾಜೇ ಪಾಟೀಲ ಹಾಗೂ ಅವರ ಸಹೋದರಿ, ಚಿತ್ರಕಲಾವಿದೆ ಉಮಾ ಪಾಟೀಲ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ವಿ.ಎಂ. ಪತ್ರಿ, ಚಂದ್ರಶೇಖರ ಮಾಳಗಿ, ಕೆ.ಎನ್. ಜಾನ್ವೇಕರ್, ಶಂಕರ ತುಮ್ಮಣ್ಣವರ, ಪೃಥ್ವಿರಾಜ ಬೆಟಗೇರಿ, ಆರ್.ಸಿ. ನಂದಿಹಳ್ಳಿ, ಜಗದೀಶ ಚವಟಗಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ, ಶಶಿಕಲಾ ಅಕ್ಕಿ, ಭಾರತಿ ಯಾವಗಲ್ಲ, ಸವಿತಾ ಮಣ್ಣಮ್ಮನವರ, ಶೇಖರ ಭಜಂತ್ರಿ, ನಾಗರಾಜ ಹುಡೇದ ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net