ಸ್ಥಗಿತಗೊಂಡಿರುವ ನರ್ಸಿಂಗ್ ಹೋಂ ಸೀಜ್ ಮಾಡಿ; ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೂ ಕ್ರಮ ಕೈಗೊಳ್ಳಿ; ಅಧಿಕಾರಿಗಳಿಗೆ ಡಿಎಚ್‌ಒ ಸೂಚನೆ

14 HVR 3
Published on

ಹಾವೇರಿ: ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಸ್ಕ್ಯಾನಿಂಗ್ ಸೆಂಟರ್ ಹಾಗೂ ನರ್ಸಿಂಗ್ ಹೋಂಗಳನ್ನು ತಕ್ಷಣ ಸೀಜ್ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪಿಸಿ ಮತ್ತು ಪಿಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಂಭತ್ತು ಸರ್ಕಾರಿ ಹಾಗೂ 67 ಖಾಸಗಿ ಒಳಗೊಂಡಂತೆ 79 ಸ್ಕ್ಯಾನಿಂಗ್ ಸೆಂಟರ್‌ಗಳಿವೆ. ಈ ಪೈಕಿ ಆರು ಸ್ಕ್ಯಾನಿಂಗ್ ಖಾಸಗಿ ಸೆಂಟರ್‌ಗಳು ಸ್ಥಗಿತಗೊಂಡಿವೆ. ನಿಯಮಾನುಸಾರ ಪ್ರತಿ ತಿಂಗಳು ಸ್ಕ್ಯಾನಿಂಗ್ ವರದಿ ನೀಡದ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಸಹ ಪರಿಶೀಲಿಸಿ ಸೀಜ್ ಮಾಡಿ ಎಂದು ಸೂಚಿಸಿದರು.
ಸ್ಕ್ಯಾನಿಂಗ್ ಯಂತ್ರಕ್ಕೆ ಪರವಾನಗಿ ಪಡೆದವರು ಕಾಲ ಮಿತಿಯೊಳಗೆ ನವೀಕರಿಸಿಕೊಳ್ಳಬೇಕು. ಹೊಸದಾಗಿ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಕೆಯಾದರೆ ತ್ವರಿತವಾಗಿ ಪರಿಶೀಲನೆ ನಡೆಸಿ, ನಿಮಾನುಸಾರ ವಿಲೇಗೊಳಿಸಬೇಕು. ನವೀಕರಣ ಮತ್ತು ಹೊಸದಾಗಿ ಪರವಾನಗಿ ನೀಡುವಾಗ ಪಿಸಿ ಮತ್ತು ಪಿಎನ್.ಡಿ.ಟಿ ನಿಯಮಾವಳಿಗಳ ಪಾಲನೆ ಕುರಿತಂತೆ ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಪ್ರಸವ ಪೂರ್ವ ಲಿಂಗಪತ್ತೆ ಬಗ್ಗೆ ಜಿಲ್ಲೆಯಾದ್ಯಂತ ತೀವ್ರ ನಿಗಾ ವಹಿಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಹಾಗೂ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೇವರಾಜ ಎಸ್. ಮಾತಮಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸ್ಥಗಿತಗೊಂಡಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಹಿತಿ, ಆನ್‌ಲೈನ್‌ನಲ್ಲಿ ಎಫ್-ಫಾರ್ಮ್ ನಮೂದಿಸದೇ ಇರುವ ಸಂಸ್ಥೆಗಳು, ಹೊಸ ನೋಂದಣಿ ಹಾಗೂ ನವೀಕರಣ ಅರ್ಜಿಗಳ ಮಾಹಿತಿ ನೀಡಿದರು. ಸ್ಕ್ಯಾನಿಂಗ್ ಸೆಂಟರ್‌ಗಳ ನೋಂದಣಿ, ನವೀಕರಣಕ್ಕಾಗಿ ಪಿಸಿ ಮತ್ತು ಪಿಎನ್.ಡಿ.ಟಿ. ಕಾಯ್ದೆಯಡಿ ಮೇ-2022ರವರೆಗೆ 26.8 ಲಕ್ಷ ರೂ. ಸಂಗ್ರವಾಗಿದೆ ಎಂದು ಮಾಹಿತಿ ನೀಡಿದರು.
ಪಿಸಿ ಮತ್ತು ಪಿಎನ್.ಡಿ.ಟಿ. ಕಾಯ್ದೆಯಡಿ ಹೊಸ ನೋಂದಣಿ, ನವೀಕರಣಕ್ಕಾಗಿ ಸ್ವೀಕೃತವಾಗುವ ಅರ್ಜಿಗಳನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಪಿಸಿ ಮತ್ತು ಪಿಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ ಕಾನೂನು ತಜ್ಞ ಎಂ.ವಿ.ಕುಂಠೆ, ಮಕ್ಕಳ ತಜ್ಞ ಡಾ.ವಿಲಾಸಗೌಡ ಹಿರೇಗೌಡರ, ರೇಡಿಯಾಲಜಿಸ್ಟ್ ಡಾ.ಸಿ.ಎಂ.ಮಲ್ಲಿಕಾರ್ಜುನ, ಡಾ.ಚಿನ್ಮಯ ಕುಲಕರ್ಣಿ, ಡಾ.ಅರುಣ ಮಲ್ಲಾಡದ, ಇಡಾರಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಪರಿಮಳಾ ಜೈನ, ಇತರರು ಉಪಸ್ಥಿತರಿದ್ದರು.
ವೈದ್ಯರ ಮೇಲೆ ನಿಗಾ ಇಡಿ
ಒಬ್ಬರೇ ವೈದ್ಯರು ಎರಡು ಸ್ಥಳಗಳಲ್ಲಿ ಸೇವೆ ನೀಡುತ್ತಿದ್ದರೆ ಅವರು ಯಾವ ಸ್ಥಳದಲ್ಲಿ ಎಷ್ಟು ಸಮಯ ಸಿಗುತ್ತಾರೆ ಎಂದು ಸಮಯ ನಮೂದಿಸುವುದು ಕಡ್ಡಾಯವಾಗಿದೆ. ಒಬ್ಬ ವೈದ್ಯರು ಎರಡು ಕಡೆಗಳಲ್ಲಿ ಮಾತ್ರ ಸೇವೆ ನೀಡಲು ಅವಕಾಶವಿದೆ. ನರ್ಸಿಂಗ್ ಹೋಂಗಳ ಸ್ಥಳ ಬದಲಾವಣೆ ಅರ್ಜಿಗಳನ್ನು ನಿಯಮಾನುಸಾರ ಕ್ರಮಗೊಳ್ಳಬೇಕು ಎಂದು ಡಿಎಚ್‌ಒ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net