ನರ್ಸಿಂಗ್ ಹುದ್ದೆಗಾಗಿ ನೂಕು ನುಗ್ಗಲು; 37 ಹುದ್ದೆಗಳಿಗೆ 300ಕ್ಕೂ ಅಧಿಕ ಅರ್ಜಿ; ಧಾರವಾಡ, ಬೆಂಗಳೂರಿನಿಂದಲೂ ಆಗಮನ

12 HVR 6 B
Published on

ಹಾವೇರಿ: ಗುತ್ತಿಗೆ ಆಧಾರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನರ್ಸಿಂಗ್ ಹಾಗೂ ಮತ್ತಿತರ 37 ಖಾಲಿ ಹುದ್ದೆಗಳ ನೇಮಕಾತಿಗಾಗಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ನೇರ ಸಂದರ್ಶನದಲ್ಲಿ 300ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯಲ್ಲಿ ಖಾಲಿ ಇರುವ ನರ್ಸಿಂಗ್, ನೇತ್ರ ಸಹಾಯಕ, ಎಎನ್‌ಎಂ, ಆಯುಷ್ ವೈದ್ಯರು, ಆರೋಗ್ಯ ನಿರೀಕ್ಷಕರು, ಮತ್ತಿತರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಸೋಮವಾರ ನಗರದ ಆರೋಗ್ಯ ಭವನದಲ್ಲಿ ಕಿರಿಯ ಆರೋಗ್ಯ ಸುರಕ್ಷಾಧಿಕಾರಿ 3 ಹುದ್ದೆ, ಶುಶ್ರೂಧಿಕಾರಿ 33 ಹುದ್ದೆ, ಸೇರಿ 37 ನರ್ಸಿಂಗ್ ಹುದ್ದೆಗಳ ನೇಮಕಾತಿಗಾಗಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆ ಹಾಗೂ ದಾಖಲೆ ಪರಿಶೀಲನೆ ಜತೆಗೆ ನೇರ ಸಂದರ್ಶನ ಏರ್ಪಡಿಸಲಾಗಿತ್ತು. ಹಾವೇರಿ ಜಿಲ್ಲೆ ಮಾತ್ರವಲ್ಲದೇ ಧಾರವಾಡ, ಗದಗ, ಬಾಗಲಕೋಟ, ಕೋಲಾರ, ಬೆಂಗಳೂರು, ಮತ್ತಿತರ ಜಿಲ್ಲೆಗಳಿಂದಲೂ 300ಕ್ಕೂ ಅಧಿಕ ಅಭ್ಯರ್ಥಿಗಳು ಆಗಮಿಸಿದ್ದರು.
ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸರತಿ ಸಾಲು ಬಹಳ ಉದ್ದ ಆಗಿತ್ತು. ಗಂಟೆಗಟ್ಟಲೆ ನಿಂತು ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗಿಯಾದರು.
ವಾರದೊಳಗೆ ಪಟ್ಟಿ ಬಿಡುಗಡೆ
ಮೊದಲ ದಿನ ಸ್ಟಾಪ್ ನರ್ಸ್ ಸೇರಿ ಇತರ 37 ಹುದ್ದೆಗಳ ಸಂದರ್ಶನಕ್ಕೆ 300ಕ್ಕೂ ಅಧಿಕ ಅರ್ಜಿ ಬಂದಿವೆ. ನಿಯಮದ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಅರ್ಹತೆ ಮತ್ತು ರೋಸ್ಟರ್ ನಿಯಮದ ಆಧಾರದಲ್ಲಿ ವಾರದೊಳಗೆ ಡಿಎಚ್‌ಒ ಕಚೇರಿ ಮತ್ತು ವೆಬ್‌ಸೈಟ್‌ನಲ್ಲಿ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುವುದು. ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗುವುದು ಎಂದು ಡಿಎಚ್‌ಒ ಡಾ.ರಾಜೇಶ ಸುರಗಿಹಳ್ಳಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net