ಹಾವೇರಿ: ಕೆ.ಪಿ.ಎಂ.ಇ ಅಧಿನಿಯಮದ ಪ್ರಕಾರ ನೋಂದಣಿ ಪಡೆಯದೇ ಹಾಗೂ ನವೀಕರಣ ಮಾಡಿಸದೇ ವೈದ್ಯರು ವೈದ್ಯ ವೃತ್ತಿ ನಡೆಸುವುದು ಕಾನೂನಿನನ್ವಯ ಅಪರಾಧವಾಗಿದೆ. ವೈದ್ಯರು, ಖಾಸಗಿ ಆರೋಗ್ಯ ಸಂಸ್ಥೆಯ ಮಾಲೀಕರು ಈ ಕೂಡಲೇ ತಮ್ಮ ಅನಧಿಕೃತ ಕ್ಲಿನಿಕ್‌ಗಳನ್ನು ಬಂದ್ ಮಾಡಲು ಹಾಗೂ ನೋಂದಣಿ ಹಾಗೂ ನವೀಕರಣ ಮಾಡಿಸಿ ವೈದ್ಯ ವೃತ್ತಿ ನಡೆಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೂಚನೆ ನೀಡಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ತಿದ್ದುಪಡಿ ಆದೇಶ 2009 ಹಾಗೂ 2018ರ ನಿಯಮದನ್ವಯ ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳಾದ ಕ್ಲಿನಿಕ್‌ಗಳು, ಲ್ಯಾಬೋರೇಟರಿಗಳು ಹಾಗೂ ನರ್ಸಿಂಗ್ ಹೋಂಗಳು ನೋಂದಣಿ ಪಡೆದು ಖಾಸಗಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಕೆ.ಪಿ.ಎಂ.ಇ ನೋಂದಣಿ ಪ್ರಮಾಣ ಪತ್ರ ಪಡೆಯದೇ ಹಾಗೂ ನೋಂದಣಿ ಅವಧಿ ಮುಕ್ತಾಯಗೊಂಡಿದ್ದರೂ ಸಹ ನವೀಕರಣಕ್ಕಾಗಿ ಅರ್ಜಿ ಸಲ್ಲಿಸದೇ ಖಾಸಗಿ ವೈದ್ಯ ವೃತ್ತಿ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ನೋಂದಣಿ ಹಾಗೂ ನವೀಕರಣ ಮಾಡಿಸದೇ ವೈದ್ಯ ವೃತ್ತಿ ನಡೆಸಿದಲ್ಲಿ ಕೆ.ಪಿ.ಎಂ.ಇ ಸೆಕ್ಷನ್ 19(1)ರ ಪ್ರಕಾರ 10,000 ರೂ.ನಿಂದ 50,000 ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಖಾಸಗಿ ವೈದ್ಯಕೀಯ ಸಂಸ್ಥೆಯು ಅಲೋಪಥಿ ಪದ್ಧತಿಯಲ್ಲಿ ತಿಳಿ ನೀಲಿ ಬಣ್ಣದ ಬೋರ್ಡ್ ಹಾಗೂ ಆಯುರ್ವೇದ ಪದ್ಧತಿಯಲ್ಲಿ ತಿಳಿ ಹಸಿರು ಬಣ್ಣದ ಬೋರ್ಡ್ ಅಳವಡಿಸಿರುವುದನ್ನು ಗಮನಿಸಿ, ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಲು ಕೋರಲಾಗಿದೆ.