

ಹಾವೇರಿ: ಆರೋಗ್ಯ ಇಲಾಖೆಯಿಂದ ಆಹ್ವಾನಿಸಲಾಗಿದ್ದ ಗುತ್ತಿಗೆ ಆಧಾರದ ವಿವಿಧ ಹುದ್ದೆಗಳ ನೇರ ಸಂದರ್ಶನಕ್ಕಾಗಿ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಆಗಮಿಸಿದ್ದ ಸಾವಿರಾರು ಅಭ್ಯರ್ಥಿಗಳು ಮೂಲ ಸೌಕರ್ಯವಿಲ್ಲದೇ ಪರದಾಡಿದರು. ರಸ್ತೆಬದಿ ಬೈಕ್ ಮೇಲೆ ಅರ್ಜಿ ಭರ್ತಿ ಮಾಡಿದರು.
ಗುತ್ತಿಗೆ ಆಧಾರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಿರಿಯ ಆರೋಗ್ಯ ಸುರಕ್ಷಾಧಿಕಾರಿ, ಶುಶ್ರೂಶಾಧಿಕಾರಿ ಹಾಗೂ ಮತ್ತಿತರ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಗರದ ವಾಲ್ಮೀಕಿ ವೃತ್ತದ ಬಳಿಯ ಆರೋಗ್ಯ ಭವನದಲ್ಲಿ ಆ.12ರಿಂದ 14ರವರೆಗೆ ನೇರ ಸಂದರ್ಶನ ಆಯೋಜಿಸಲಾಗಿತ್ತು. ಸಂದರ್ಶನದಲ್ಲಿ ಭಾಗವಹಿಸಲು ಸಾವಿರಾರು ಅಭ್ಯರ್ಥಿಗಳು, ಪಾಲಕರು ಆಗಮಿಸಿದ್ದರು.
ಅಭ್ಯರ್ಥಿಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಮತ್ತಿತರ ವ್ಯವಸ್ಥೆ ಇರಲಿಲ್ಲ. ಅರ್ಜಿ ಪಡೆಯಲು ಸರತಿಯಲ್ಲಿ ನಿಂತಿದ್ದ ಅಭ್ಯರ್ಥಿಗಳಿಗೆ ಕೊಡಲು ಅರ್ಜಿಗಳೂ ಸಿಬ್ಬಂದಿ ಬಳಿ ಇರಲಿಲ್ಲ. ಜೆರಾಕ್ಸ್ ಯಂತ್ರವೂ ಇರಲಿಲ್ಲ. ಇದರಿಂದ ಕೆಲಕಾಲ ಅಭ್ಯರ್ಥಿಗಳು ಪರದಾಡಿದರು. ಹೇಗೋ ಮಾಡಿ ಎಲ್ಲಿಂದಲೋ ಜೆರಾಕ್ಸ್ ಯಂತ್ರ ಹೊತ್ತು ತಂದ ಸಿಬ್ಬಂದಿ ಅರ್ಜಿ ಜೆರಾಕ್ಸ್ ಮಾಡಿ ಹಂಚಿದರು. ಆದರೆ, ಅದನ್ನು ತುಂಬಲು ಸೂಕ್ತ ಸ್ಥಳವೇ ಇರಲಿಲ್ಲಿ. ಹಾಗಾಗಿ, ರಸ್ತೆಬದಿ ಬೈಕ್‌ಮೇಲೆ ಅರ್ಜಿ ಇಟ್ಟು ತುಂಬುವ ಸಾಹಸ ಮಾಡಬೇಕಾಯಿತು ಎಂದು ಬೆಂಗಳೂರಿನಿಂದ ಆಗಮಿಸಿದ್ದ ಅಭ್ಯರ್ಥಿ ಸಂಬಂಧಿ ಮಂಜುನಾಥ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಮರ್ಯಾದೆ ಹಾಳು
ರಾಜ್ಯದ ಹಲವು ಜಿಲ್ಲೆಗಳಿಂದ ಹಾವೇರಿಗೆ ಸಾವಿರಾರು ಅಭ್ಯರ್ಥಿಗಳು ಆಗಮಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಕನಿಷ್ಠ ವ್ಯವಸ್ಥೆಯನ್ನೂ ಮಾಡದೇ ಸಂದರ್ಶನ ಹಮ್ಮಿಕೊಂಡ ಪರಿಣಾಮ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಜಿಲ್ಲೆಯ ಮರ್ಯಾದೆ ಹಾಳಾಗುತ್ತದೆ. ಈ ಕುರಿತು ಡಿಸಿ ಅವರಿಗೆ ಹಾಗೂ ಮಾಧ್ಯಮದವರಿಗೆ ದೂರವಾಣಿ ಕರೆ ಮೂಲಕ ದೂರಿದ ಬಳಿಕ ಅಧಿಕಾರಿಗಳು ಕುರ್ಚಿ, ನೀರು, ಜೆರಾಕ್ಸ್ ವ್ಯವಸ್ಥೆ ಮಾಡಿದರು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹುಬ್ಬಳ್ಳಿ ‘ವಿಜಯವಾಣಿ’ಗೆ ತಿಳಿಸಿದರು.