

ಹಾವೇರಿ: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಎಚ್5 ಎನ್1 (ಹಕ್ಕಿಜ್ವರ), ಇತ್ತೀಚೆಗೆ ರಾಜ್ಯದ ಚಿಕ್ಕಬಳಾಪುರ ಮತ್ತು ಬಳ್ಳಾರಿ ಜಿಲ್ಲೆಯಲ್ಲೂ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಬಹಳ ಜಾಗರೂಕರಾಗಿರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಎಚ್ಚರಿಕೆ ನೀಡಿದ್ದಾರೆ.
ಹಕ್ಕಿ, ಕೋಳಿಗಳಲ್ಲಿ ಯಾವುದೇ ರೀತಿಯ ಅಸಹಜ ಸಾವು ಹಾಗೂ ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ವೈಯಕ್ತಿಕ ಸುರಕ್ಷತೆಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ಶಂಕಿತ ಪ್ರದೇಶದಲ್ಲಿ ಜ್ವರ, ಕೆಮ್ಮು, ತಲೆ ನೋವು, ಗಂಟಲು ನೋವು ಮತ್ತು ಸ್ನಾಯು ನೋವುಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ಪಡೆಯಬೇಕು. ಈ ಕುರಿತು ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೋಳಿ ಸಾಕಾಣಿಕಾ ಕೇಂದ್ರಗಳನ್ನು ಈಗಾಗಲೇ ಜಿಲ್ಲೆಯಾದ್ಯಂತ ಗುರುತಿಸಲಾಗಿದ್ದು, ಕಟ್ಟೆಚ್ಚರ ವಹಿಸಲು ಕೋಳಿ ಫಾರ್ಮ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಕೋಳಿಫಾರ್ಮಗಳಿಗೆ ಹೊರಗಿನಿಂದ ಬರುವ ವಾಹನಗಳನ್ನು ಸ್ಯಾನಿಟೈಸೇಷನ್ ಮಾಡಿಸಿ ಒಳಗಡೆ ಬಿಡಲು ಹಾಗೂ ಕೋಳಿ ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಹಾಗೂ ಸ್ಯಾನಿಟೈಸರ್ ಬಳಸಲು ತಿಳಿಸಲಾಗಿದೆ. ಕೆಲಸದ ನಂತರ ನಂಜುನಾಶಕ ದ್ರಾವಣದಿಂದ ಶುಚಿಗೊಳಿಸಿಕೊಳ್ಳಲು ಹಾಗೂ ಅಸ್ವಾಭಾವಿಕವಾಗಿ ಕೋಳಿಗಳು ಮರಣ ಹೊಂದಿದ್ದಲ್ಲಿ ಕೂಡಲೇ ಪಶುಪಾಲನಾ ಇಲಾಖೆಗೆ ಮಾಹಿತಿ ನೀಡಲು ತಿಳಿಸಿಲಾಗಿದೆ.
ಕೋಳಿ ಫಾರಂಗಳಲ್ಲಿ ಕೋಳಿಗಳಿಗೆ ಆಹಾರ ಸಾಗಾಟ ಮಾಡುವ ವಾಹನಗಳಿಗೆ ನಂಜುನಾಶಕಗಳಿಂದ ಶುಚಿಗೊಳಿಸಬೇಕು. ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಮುಂಜಾಗ್ರತೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಈ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.
ಹಕ್ಕಿ ಜ್ವರದ ಬಗ್ಗೆ ಶಾಲಾ-ಕಾಲೇಜು, ವಸತಿ ಶಾಲೆಗಳಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳ ಮೂಲಕ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಅರಣ್ಯಗಳಲ್ಲಿ, ಪಕ್ಷಿಧಾಮಗಳಲ್ಲಿ, ಕೆರೆ ಕುಂಟೆಗಳ ಹತ್ತಿರ ಅರಣ್ಯ ಇಲಾಖೆಯವರಿಂದ ವಲಸೆ ಹಕ್ಕಿಗಳ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಆದರೆ ಕೋಳಿ ಮಾಂಸ ಹಾಗೂ ಮೊಟ್ಟೆಗಳನ್ನು 70 ಡಿಗ್ರಿಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿ ಸೇವಿಸುವುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.