ಆಧುನಿಕತೆ ಹೆಸರಲ್ಲಿ ದುಶ್ಚಟ ಬೇಡ; ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿಕೆ

3 HVR 3
Published on

ಹಾವೇರಿ: ಮಾನವ ಜನ್ಮ ಪಡೆಯಲು ಪುಣ್ಯ ಮಾಡಿರಬೇಕು. ದೇಹವೇ ದೇಗುಲ ಎಂದು ಶರಣರು ಉಲ್ಲೇಖಿಸಿದ್ದರು. ಆಧುನಿಕತೆಯ ಹೆಸರಿನಲ್ಲಿ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವ ಸನ್ನಿವೇಶಗಳನ್ನು ಕಂಡು ನೋವಾಗುತ್ತಿದೆ. ಇದು ಸರಿಯಲ್ಲ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿಸ್ಮತಿ ಮತ್ತು ನವಜೀವನ ಸದಸ್ಯರ ಸಮಾವೇಶ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.
ಗಾಂಧೀಜಿಯವರ ದುಶ್ಚಟ ಮುಕ್ತ ಸಮಾಜದ ಕನಸನ್ನು ನನಸು ಮಾಡಲು ಸಂಕಲ್ಪ ಕಾರ್ಯಕ್ರಮಗಳು ಮತ್ತು ಮದ್ಯವರ್ಜನ ಶಿಬಿರಗಳ ಮೂಲಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಯೋಜಿಸುತ್ತಿದ್ದಾರೆ. ದುಶ್ಚಟಗಳಿಂದ ದೂರವಾಗಿ ಉತ್ತಮ ಜೀವನ ನಡೆಸುತ್ತಿರುವ ನವಜೀವನ ಸಮಿತಿ ಸದಸ್ಯರಿಗೆ ಗಾಂಧಿಜಯಂತಿ ದಿನ ಅಭಿನಂಡಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗಾಂಧಿಸ್ಮತಿ ನಿಮಿತ್ತ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ನವಜೀವನ ಸಮಿತಿ ಸದಸ್ಯರಿಗೆ ಮತ್ತು 6 ಯೋಜನಾ ಪ್ರದೇಶಗಳ ಸಾಧಕ ನವಜೀವನ ಸಮಿತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ನಾನು ತಾಂಡಾ ಪರಿಸರದಲ್ಲಿ ಹುಟ್ಟಿ ಬೆಳೆದರೂ ರಾಜಕೀಯ ವ್ಯಕ್ತಿಯಾಗಿದ್ದರೂ ಯಾವತ್ತೂ ನನ್ನ ಬಳಿ ದುಶ್ಚಟಗಳು ಸುಳಿದಿಲ್ಲ. ಸಂಸ್ಕಾರಯುತ ಶಿಕ್ಷಣ ಮತ್ತು ಜೀವನ ಶಿಸ್ತು ಇದಕ್ಕೆ ಕಾರಣವಾಗಿದೆ. ಧರ್ಮಸ್ಥಳ ಕ್ಷೇತ್ರದ ಮೂಲಕ ನಿಮಗೆಲ್ಲರಿಗೂ ದುಶ್ಚಟಮುಕ್ತ ಬದುಕು ಪ್ರಾಪ್ತವಾಗಿದೆ. ಇದರಿಂದ ನಿಮ್ಮ ಮನೆಯ ಹೆಣ್ಣು ಮಕ್ಕಳು ನೆಮ್ಮದಿಯ ಜೀವನ ಪಡೆಯುವಂತಾಗಿದೆ ಎಂದು ಹೇಳಿದರು.
ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು. ನಂತರ ಧಾರವಾಡ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ ಹಕ್ಕೋತ್ತಾಯದ ವಿಷಯ ಮಂಡಿಸಿದರು.
ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್, ಮಾಜಿ ಜಿಲ್ಲಾಧ್ಯಕ್ಷ ಮುರುಗೆಪ್ಪ ಶೆಟ್ಟರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಮುತ್ತಣ್ಣ ಯಲಿಗಾರ, ಉಪಾಧ್ಯಕ್ಷ ನಾಗರಾಜ ಆನ್ವೇರಿ, ಕೋಶಾಧಿಕಾರಿ ಮಂಜುನಾಥ ಯಲಿವಾಳ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಹಾವೇರಿ ತಾಲೂಕು ಯೋಜನಾಧಿಕಾರಿ ನಾರಾಯಣ ಗೊಂಡ ವಂದಿಸಿದರು. ಹಾನಗಲ್ಲ ಯೋಜನಾಧಿಕಾರಿ ರಾಘವೇಂದ್ರ ಆರ್.ಪಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net