ಹಿರೇಲಿಂಗದಹಳ್ಳಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾಮಗಾರಿ

31 HVR 3 B
Published on

ಹಾವೇರಿ: ತಾಲೂಕಿನ ಕುರುಬಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಗಕಟ್ಟೆ ಕೆರೆ ಹೂಳೆತ್ತುವ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.

ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು ಮಾತನಾಡಿ, ಕೆರೆಗಳು ಕಣ್ಮರೆಯಾಗಿ ಹನಿ ನೀರಿಗಾಗಿ ಪರದಾಡುತ್ತಿರುವ ರೈತರ ಹಾಗೂ ಮಹಿಳೆಯರ ಸಂಕಷ್ಟವನ್ನು ಗಮನಿಸಿದ ವೀರೇಂದ್ರ ಹೆಗ್ಗಡೆ ದಂಪತಿ ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿಯೇ ನಮ್ಮೂರು ನಮ್ಮ ಕೆರೆ ಎಂಬ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ನಶಿಸಿ ಹೋಗುತ್ತಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಜನ, ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಹಾಗೂ ಕೃಷಿ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಹಾವೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಕೆರೆ ಹೂಳು ತುಂಬಿ ನೀರು ಮಲೀನವಾಗಿ ನಿರುಪಯುಕ್ತವಾಗಿತ್ತು. ಧರ್ಮಸ್ಥಳದ ಪೂಜ್ಯರು ನಮ್ಮ ಮನವಿಗೆ ಸ್ಪಂದಿಸಿ ಕಾಮಗಾರಿ ಕೈಗೊಂಡಿರುವುದು ಗ್ರಾಮಸ್ಥರಲ್ಲಿ ಸಂತಸವನ್ನು ಉಂಟು ಮಾಡಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರುದ್ರೇಶ ಚಿನ್ನಣ್ಣನವರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಫೈನಾನ್ಸ್ ಅಲ್ಲ. ಇದೊಂದು ಚಾರಿಟೇಬಲ್ ಟ್ರಸ್ಟ್ ಇದರ ಮೂಲಕ ಬಡ ಜನರ ಹಾಗೂ ಸಮುದಾಯ ಅಭಿವೃದ್ಧಿಗೆ ಹತ್ತು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಕೆರೆ ವಿಭಾಗದ ಇಂಜಿನಿಯರ್ ನಿಂಗರಾಜ ಕೆರೆ ಕಾಮಗಾರಿ ಕುರಿತು ಮಾಹಿತಿ ನೀಡಿದರು.

ಯೋಜನಾಧಿಕಾರಿ ನಾರಾಯಣ ಜಿ., ಸಮಿತಿಯ ಅಧ್ಯಕ್ಷ ನಾಗಪ್ಪ ಬಂಕಾಪುರ, ಗೌರವಾಧ್ಯಕ್ಷ ನಿಂಗನಗೌಡ, ಉಪಾಧ್ಯಕ್ಷ ಮರಿಸಿದ್ದಪ್ಪ ಮಾಗೋಡ, ಒಕ್ಕೂಟದ ಅಧ್ಯಕ್ಷೆ ಪುಟ್ಟವ್ವ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಬಸಪ್ಪ, ಗುಡ್ಡಪ್ಪ, ಭರಮಲಿಂಗಪ್ಪ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕೃಷಿ ಮೇಲ್ವಿಚಾರಕ ಬಸವರಾಜ ಸ್ವಾಗತಿಸಿದರು. ಮೇಲ್ವಿಚಾರಕಿ ದೀಪಾರಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net