

ಹಾವೇರಿ: ದೇಶದ ಪ್ರಮುಖ ಶ್ರದ್ಧಾ, ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಧರ್ಮಸ್ಥಳ ದೇವಸ್ಥಾನ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಂಚು ರೂಪಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಎಸ್‌ಐಎ ತನಿಖೆ ನಡೆಸುವಂತೆ ಆಗ್ರಹಿಸಿ ಶ್ರೀ ಧರ್ಮಸ್ಥಳ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಧರ್ಮಸ್ಥಳ ಕ್ಷೇತ್ರದ 500ಕ್ಕೂ ಹೆಚ್ಚಿನ ಅಭಿಮಾನಿಗಳು ಶ್ರೀಕ್ಷೇತ್ರದ ದೇಗುಲದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಘೋಷಣೆ ಕೂಗಿ, ಪ್ಲೇಕಾರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರಲೆಂದು ಸಮೀರ್ ಎಂ.ಡಿ., ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣನವರ, ಸಂತೋಷ ಶೆಟ್ಟಿ, ಜಯಂತ ಟಿ. ಅವರ ಉದ್ದೇಶವೇನು ? ಇವರ ಆದಾಯದ ಮೂಲ ಏನು ? ಇವರಿಗೆ ಎಲ್ಲಿಂದ ಫಂಡಿಂಗ್ ಬರುತ್ತಿದೆ ? ಎಂಬ ಕುರಿತು ಎನ್‌ಐಎ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದರು.
ಸುಮಾರು 800ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರ ಹೆಸರಿಗೆ ತಕ್ಕಂತೆ ಧರ್ಮದ ಕಾರ್ಯಗಳನ್ನು ಮಾಡುತ್ತಿದೆ. ಇಂತಹ ಐತಿಹಾಸಿಕ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಇದರಿಂದ ಕೋಟ್ಯಂತರ ಭಕ್ತರ ಮನಸಿಗೆ ನೋವು ಉಂಟಾಗಿದೆ. ದುಡಿಯುವ ಕೈಗಳಿಗೆ ಹಣಕಾಸಿನ ನೆರವು, ಮಹಿಳೆಯರ ಸಬಲೀಕರಣಕ್ಕೆ ವೀರೇಂದ್ರ ಹೆಗ್ಗಡೆ ಅವರು ಧರ್ಮ ವ್ಯವಸ್ಥೆ ಬೆಳೆಸಿದ್ದಾರೆ. ಕಾಣದ ಕೈಗಳು, ಅನಾಮಿಕ ವ್ಯಕ್ತಿಯ ಹೇಳಿಕೆ ಆಧಾರದ ಮೇಲೆ ತನಿಖೆ ಮಾಡಲಾಗುತ್ತಿದೆ. ಇದೇ ವ್ಯವಸ್ಥೆ ಮುಂದುವರೆದರೆ ಧರ್ಮಸ್ಥಳಕ್ಕೆ ಕಾಲ್ನಡಿಗೆ ಮೂಲಕ ಪ್ರತಿಭಟಿಸಲಾಗುತ್ತದೆ.
ಧರ್ಮಕ್ಕೆ ಮತ್ತೊಂದು ಹೆಸರು ಧರ್ಮಸ್ಥಳ. ನ್ಯಾಯಕ್ಕೆ ಹೆಸರಾದವರು ವೀರೇಂದ್ರ ಹೆಗ್ಗಡೆ. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟ. ಎಲ್ಲ ಅಪ್ರಪಚಾರ ನಿಲ್ಲಿಸಬೇಕು. ಎಸ್‌ಐಟಿ ತನಿಖೆಗೆ ವೀರೇಂದ್ರ ಹೆಗ್ಗಡೆ ಅವರು ಸಹಕಾರ ಕೊಡುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿ ಆರಂಭಿಸಲಾಗಿದೆ. ದೂರುದಾರರು ಸಾಕ್ಷಿಗಳು ಇದ್ದರೆ ಹೋಗಿ ಕೊಡಬೇಕು. ಅದನ್ನು ಬಿಟ್ಟು ಕೋಟ್ಯಂತರ ಭಕ್ತರ ಶ್ರದ್ದಾಕೇಂದ್ರದ ಬಗ್ಗೆ ಅಪಪ್ರಚಾರ ಮಾಡಬಾರದು. ಕ್ಷೇತ್ರದ ಹೆಸರು ಕೆಡಿಸುವ ಹುನ್ನಾರ ನಡೆದಿದೆ. ಇನ್ನುಮುಂದೆ ಈ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದರೆ ತಕ್ಕ ಉತ್ತರ ಕೊಡುತ್ತೇವೆ ಎಂದರು ಪ್ರತಿಭಟನಾಕಾರರು.
ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆಪಾದನೆ ಮಾಡುವ, ಸುಳ್ಳು ಮಾಹಿತಿ ನೀಡುವ ಯೂಟ್ಯೂಬರ್‌ಗಳು ಹಾಗೂ ಅನಾಮಿಕ ಮುಸುಕುಧಾರಿ ವ್ಯಕ್ತಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸರ್ಕಾರ ದುಷ್ಟ ಶಕ್ತಿಗಳಿಗೆ ಪ್ರಚೋದನೆ ನೀಡಬಾರದು. ಪುಣ್ಯಕ್ಷೇತ್ರ ಅಪವಿತ್ರ ಗೊಳಿಸಲಾಗುತ್ತಿದೆ. ಯೂಟ್ಯೂಬರ್‌ಗಳ ಅಕೌಂಟ್‌ಗಳನ್ನೂ ಪರಿಶೀಲನೆ ಮಾಡಬೇಕು. ನಿಷ್ಪಕ್ಷಪಾತವಾದ ತನಿಖೆ ಆಗಬೇಕು. ಗೊಂದಲಗಳಿಗೆ ತೆರೆ ಎಳೆಯಬೇಕು ಎಂದರು.
ಸಿಕ್ಕ ಸಿಕ್ಕಲ್ಲಿ ಭೂಮಿ ಅಗೆಯಲಾಗುತ್ತಿದೆ. ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಲಾಗುತ್ತಿದೆ. ಪವಿತ್ರ ಸ್ಥಳವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ಮಾಡಲಾಗುತ್ತಿದೆ. ವಿರೇಂದ್ರ ಹೆಗ್ಗಡೆ ಹಾಗೂ ಕುಟುಂಬದವರ ವಿರುದ್ಧ ಅಪಪ್ರಚಾರ, ಧಾರ್ಮಿಕ ವ್ಯವಸ್ಥೆ ಹಾಳು ಮಾಡಲಾಗುತ್ತಿದೆ. ಅನಾಮಿಕ ವ್ಯಕ್ತಿ, ಯೂಟ್ಯೂಬರ್ ವಿರುದ್ಧ ತನಿಖೆ ಆಗಬೇಕು. ಅನ್ಯಾಯದ ವಿರುದ್ಧ ಶಿಕ್ಷೆ ಆಗಲಿ. ವಿರೇಂದ್ರ ಹೆಗ್ಗಡೆ ಅವರು ಸಾರ್ವಜನಿಕರ ಹಿತಾಸಕ್ತಿ ಕಾಪಾಡುತ್ತಿದ್ದಾರೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಟ್ಟಿದ್ದಾರೆ. ಸರ್ಕಾರದಿಂದ ನಿಷ್ಪಕ್ಷಪಾತವಾದ ತನಿಖೆ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಹಾವೆಮುಲ್ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ, ಕಲ್ಯಾಣಕುಮಾರ ಶೆಟ್ಟರ್, ಪ್ರಕಾಶ ಶೆಟ್ಟಿ, ಉದಯ ಶೆಟ್ಟಿ, ಮುರಿಗೆಪ್ಪ ಶೆಟ್ಟರ್, ವೀರಭದ್ರಪ್ಪ ಗೊಡಚಿ, ಅಶೋಕ ಮರಚರಡ್ಡಿ, ಕರಿಬಸಪ್ಪ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಚಂದ್ರಶೇಖರ ಕಾರಗಿ, ರಮೇಶ ಆನವಟ್ಟಿ, ನಿತ್ಯಾನಂದ ಕುಂದಾಪುರ, ವಜ್ರಕುಮಾರ, ನಿಜಲಿಂಗಪ್ಪ ಬಸೇಗೆಣ್ಣಿ, ದಿಲೀಪಕುಮಾರ, ಮತ್ತಿತರರು ಇದ್ದರು.