

ಹಾವೇರಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ‘ಧರ್ಮದ ಉಳಿವಿಗಾಗಿ ಧರ್ಮಯುದ್ಧ’ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಶನಿವಾರ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ಸುಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬಿಜೆಪಿಗರು ಆಕ್ರೋಶ ಹೊರಹಾಕಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ಪಾದಯಾತ್ರೆ ನಡೆಸಿದರು. ಹುಕ್ಕೇರಿಮಠ ರಸ್ತೆ, ಎಂ.ಜಿ ರಸ್ತೆ, ಗಾಂಧಿ ವೃತ್ತ, ಹಳೇ ಕೋರ್ಟ್ ರಸ್ತೆ ಮಾರ್ಗವಾಗಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದರು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್ ಹಾಗೂ ಪೂರ್ವಾಪರ ಯೋಚನೆ ಮಾಡದೆ ಎಸ್.ಐ.ಟಿ ತನಿಖೆ ರಚಿಸಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಿಂದು ಧಾರ್ಮಿಕ ಸ್ಥಳಗಳ ಬಗ್ಗೆ ದಾಖಲೆಗಳಿಲ್ಲದೇ ಅಪಪ್ರಚಾರ ಮಾಡುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಎನ್‌ಐಎಗೆ ಪ್ರಕರಣ ವರ್ಗಾಯಿಸುವಂತೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಲಕ್ಷಾಂತರ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಶ್ರೀಕ್ಷೇತ್ರ ಮಾಡುವ ಕೆಲಸಗಳನ್ನು ಸ್ವತಃ ಸರ್ಕಾರಕ್ಕೂ ಮಾಡಲು ಸಾಧ್ಯವಾಗಲ್ಲ. ಮಹಿಳೆಯರ ಸಬಲೀಕರಣಕ್ಕೆ ಸಾಲ, ಶಿಕ್ಷಣಕ್ಕೆ ಉತ್ತೇಜನ, ಆರೋಗ್ಯಕ್ಕೆ ವೈದ್ಯಕೀಯ ಸೇವೆ, ದೇವಸ್ಥಾನ, ಕೆರೆಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಲು ಕಟಿಬದ್ಧವಾಗಿದೆ. ಇದನ್ನು ಸಹಿಸದ ಸರ್ಕಾರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದೆ. ಅಪಪ್ರಚಾರ ಮಾಡುವ ಮುಸುಕುದಾರಿ ವ್ಯಕ್ತಿ, ಗಿರೀಶ ಮಟ್ಟೆಣ್ಣನವರ, ಸಮೀರ್, ಸುಜಾತಾ ಭಟ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಎಡಪಂಥೀಯ ವಿಚಾರಧಾರೆ ಉಳ್ಳವರಿಗೆ ಸಾಥ್ ನೀಡುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ವಕ್ತಾರ ಪರಮೇಶ್ವರಪ್ಪ ಮೇಗಳಮನಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕಳಸೂರ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ರುದ್ರೇಶ ಚಿನ್ನಣ್ಣನವರ, ರಮೇಶ ಪಾಲನಕರ, ಕಿರಣ ಕೊಳ್ಳಿ, ಅಭಿಷೇಕ ಗುಡಗೂರ, ಕಿರಣ ಕೋಣನವರ, ವೀರಣ್ಣ ಅಂಗಡಿ, ಸತೀಶ ಗೌಳಿ, ಮೃತ್ಯುಂಜಯ ಮುಷ್ಠಿ, ಕೆ.ಸಿ ಕೋರಿ, ನಿಖಿಲ ಹಿರೇಮಠ, ಶಿವಯೋಗಿ ಹುಲಿಕಂತಿಮಠ, ವೆಂಕಟೇಶ ಜರತಾರಘರ, ವಿಜಯಕುಮಾರ ಚಿನ್ನಿಕಟ್ಟಿ, ನೀಲಪ್ಪ ಚಾವಡಿ, ನಿಖಿಲ ಡೊಗ್ಗಳ್ಳಿ, ಲಲಿತಾ ಗುಂಡೇನಹಳ್ಳಿ, ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ಪುಷ್ಪಲತಾ ಚಕ್ರಸಾಲಿ, ಇತರರಿದ್ದರು.
ಕಾಟಾಚಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರವಾಸ
ರಾಜ್ಯ ಸರ್ಕಾರ ಹಿಂದುಗಳು, ಮಹಿಳೆಯರು, ಮಕ್ಕಳ ರಕ್ಷಣೆಯನ್ನು ಮರೆತಿದೆ. ಹಾವೇರಿ ಜಿಲ್ಲೆಗೆ ಮಹಿಳಾ ಆಯೋಗದ ಅಧ್ಯಕ್ಷರು ಇತ್ತೀಚೆಗೆ ಕಾಟಾಚಾರಕ್ಕೆ ಎಂಬಂತೆ ಬಂದು ಹೋದರು. ಹಾನಗಲ್ಲ ಗ್ಯಾಂಗ್‌ರೇಪ್ ಪ್ರಕರಣದ ಸಂತ್ರಸ್ತೆ ಅಲ್ಪಸಂಖ್ಯಾತ ಮಹಿಳೆ ಹಾಗೂ ಬ್ಯಾಗವಾದಿ ಗ್ರಾಮದಲ್ಲಿ ಮಕ್ಕಳ, ಮಹಿಳೆಯರ ಕಳ್ಳಸಾಗಣೆ ಗ್ಯಾಂಗ್‌ನಲ್ಲಿ ಸಿಲುಕಿದ್ದ ಬಾಲಕಿಯನ್ನು ಭೇಟಿಯಾಗಲಿಲ್ಲ. ಈ ಕೇಸ್‌ಗಳ ಬಗ್ಗೆ ಚಕಾರ ಎತ್ತಲಿಲ್ಲ ಎಂದು ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ ಆರೋಪಿಸಿದರು.
ಅಕ್ರಮ ಹಣದ ಮೂಲ ಪತ್ತೆ ಮಾಡಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಗೃಹ ಸಚಿವ ಜಿ.ಪರಮೇರ್ಶವರ ಅವರೇ ನಿಮಗೇನಾದರೂ ವಿವೇಚನೆ ಇದ್ದರೆ ಈ ಪ್ರಕರಣವನ್ನು ಎಸ್.ಐ.ಟಿ ಬದಲಿಗೆ ಎನ್.ಐ.ಎ ತನಿಖೆಗೆ ಒಳಪಡಿಸಿ. ಅಪಪ್ರಚಾರ ಮಾಡುವ ಯೂಟ್ಯೂಬರ್‌ಗಳಿಗೆ ವಿದೇಶದಿಂದ ಅಕ್ರಮ ಹಣ ಬರುವ ಸಂಶಯವಿದ್ದು, ಇದನ್ನು ತನಿಖೆ ನಡೆಸಿ, ಎಲ್ಲರಿಗೂ ಮಂಪರು ಪರೀಕ್ಷೆ ಮಾಡಿಸಿ ಸತ್ಯಾಸತ್ಯತೆ ಹೊರಗೆಳೆಯಿರಿ ಎಂದು ವಿರುಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.