ಕೊನೆಗೂ ‘ವಿದ್ಯಾಗಿರಿ’ಯಲ್ಲಿ ದಾಖಲಾಯ್ತು ಎಫ್‌ಐಆರ್; ಬಯಲಾಯ್ತು ಕ್ಷೀರಭಾಗ್ಯ ಹಾಲಿನ ಪುಡಿ ಅಕ್ರಮ ದಂಧೆ ಪ್ರಕರಣ

3 HVR 5
Published on

ಹಾವೇರಿ: ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪೂರೈಸಬೇಕಿದ್ದ ಮೂರೂವರೆ ಟನ್ ಕೆನೆಭರಿತ ಹಾಲಿನ ಪುಡಿಯನ್ನು ಅಕ್ರಮವಾಗಿ ಸವಣೂರ ತಾಲೂಕಿನ ಡೊಂಬರಮತ್ತೂರ ಗ್ರಾಮದ ಶೆಡ್‌ವೊಂದರಲ್ಲಿ ಸಂಗ್ರಹಿಸಿ ಇಟ್ಟಿದ್ದ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕೊನೆಗೂ ಪ್ರಕರಣ ದಾಖಲಾಗಿದೆ.
ಧಾರವಾಡ ಕೆಎಂಎಫ್ ಗುತ್ತಿಗೆದಾರ ಶಿವಕುಮಾರ ನಾಡಗೌಡ ದೇಸಾಯಿ ಹಾಗೂ ಸವಣೂರ ತಾಲೂಕು ಡೊಂಬರಮತ್ತೂರ ಗ್ರಾಮದ ಬಸವರಡ್ಡಿ ವಿರುದ್ಧ ದೂರು ದಾಖಲಾಗಿದೆ.
ಶಿವಕುಮಾರ ದೇಸಾಯಿ ಗದಗ ಹಾಗೂ ಶಿರಹಟ್ಟಿ ತಾಲೂಕಿನ ಶಾಲೆಗಳಿಗೆ ಸರಬರಾಜು ಮಾಡಲೆಂದು ಜೂ.15ರಂದೇ 18,206 ಕೆಜಿ ಹಾಲಿನ ಪುಡಿ ಹಾಗೂ 3.092 ಕೆಜಿ ರಾಗಿ ಮಾಲ್ಟ್ ಅನ್ನು ಕೆಎಂಎಫ್ ಲೋಡ್ ಮಾಡಿ ಕಳುಹಿಸಿತ್ತು. ನಿಯಮದ ಪ್ರಕಾರ ನೇರವಾಗಿ ಶಾಲೆಗಳಿಗೆ ಸರಬರಾಜು ಮಾಡಬೇಕಿತ್ತು. ಆದರೆ, ನಿಬಂಧನೆಗಳನ್ನು ಉಲ್ಲಂಘಿಸಿದ ಗುತ್ತಿಗೆದಾರ 3,757 ಕೆಜಿ ಹಾಲಿನ ಪುಡಿ ಹಾಗೂ 309 ಕೆಜಿ ರಾಗಿ ಮಾಲ್ಟ್ ಅನ್ನು ತಮ್ಮ ಪಾಯ್ದೆಗೋಸ್ಕರ ಬೇರೆಡೆ ಮಾರಾಟ ಮಾಡುವ ದುರುದ್ದೇಶದಿಂದ ಡೊಂಬರಮತ್ತೂರಿನ ಬಸವರಡ್ಡೇರ ಎಂಬುವರ ಮನೆ ಬಳಿಯ ಶೆಡ್‌ನಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದರು. ಈ ಮೂಲಕ ಸಂಸ್ಥೆಗೆ ನಂಬಿಕೆ ದ್ರೋಹ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಕೆಎಂಎಫ್ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಎಂಡಿ ಡಾ.ವೀರೇಶ ತರಲಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಧಾರವಾಡ ಹಾಲು ಒಕ್ಕೂಟದ ಅಧಿಕಾರಿಗಳು ಧಾರವಾಡ ಪೊಲೀಸ್ ಠಾಣೆ, ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಕಾಲಹರಣ ಮಾಡಿದ್ದರು. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಎಫ್‌ಐಆರ್ ದಾಖಲಾಗದಂತೆ ಒತ್ತಡವಿದೆ. ಈ ದಂಧೆಯ ಹಿಂದೆ ದೊಡ್ಡ ಜಾಲವಿದೆ. ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಬೇಕೆಂದು ‘ವಿಜಯವಾಣಿ’ ಜೂ.26ರಂದು ವಿಶೇಷ ಫಾಲೋ ಅಪ್ ಸ್ಟೋರಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಧಾರವಾಡ ಕೆಎಂಎಫ್ ಪ್ರಕರಣ ದಾಖಲಿಸಿದೆ.
ಏನಿದು ಪ್ರಕರಣ ?
ಧಾರವಾಡ ಕೆಎಂಎಫ್‌ನಿಂದ ಜೂ.16ರಂದು ಸರಬರಾಜಾಗಿದ್ದ ಹಾಲಿನ ಪುಡಿ ಹಾಗೂ ರಾಗಿ ಮಾಲ್ಟ್‌ಅನ್ನು ನೇರವಾಗಿ ಗದಗ ಹಾಗೂ ಶಿರಹಟ್ಟಿ ಶಾಲೆಗಳಿಗೆ ತಲುಪಿಸಬೇಕಿತ್ತು. ಆದರೆ, ಅದರಲ್ಲಿ ಸುಮಾರು 12 ಲಕ್ಷ ರೂ. ಮೌಲ್ಯದ ಮೂರೂವರೆ ಟನ್ ಹಾಲಿನ ಪುಡಿ ಹಾಗೂ 309 ಕೆಜಿ ರಾಗಿ ಮಾಲ್ಟ್‌ಅನ್ನು ಗುತ್ತಿಗೆದಾರರು ಅಕ್ರಮವಾಗಿ ಸವಣೂರ ತಾಲೂಕು ಡೊಂಬರಮತ್ತೂರಿನ ಬಸವರೆಡ್ಡಿ ಎಂಬುವರ ಮನೆಯ ಶೆಡ್‌ನಲ್ಲಿ ಇರಿಸಿದ್ದರು. ಜೂ.21ರಂದು ಹಾಲಿನ ಪುಡಿ ಬೇರೆಡೆ ಸಾಗಿಸುವಾಗಿ ಬೈಕ್ ಅಪಘಾತ ಸಂಭವಿಸಿದಾಗ ಅಕ್ರಮ ದಂಧೆ ಬಯಲಿಗೆ ಬಂದಿತ್ತು. ಈ ಪ್ರಕರಣ ತಮ್ಮ ವ್ಯಾಪ್ತಿಯದ್ದಲ್ಲ ಎಂದು ಹಾವೇರಿ ಹಾಲು ಒಕ್ಕೂಟದವರು ಧಾರವಾಡ ಹಾಲು ಒಕ್ಕೂಟಕ್ಕೆ ವರ್ಗಾಯಿಸಿದ್ದರು. ಆದರೆ, ಪ್ರಕರಣ ದಾಖಲಿಸಲು ಮೀನಮೇಷ ಎಣಿಸಿದ್ದರು.
ಇಬ್ಬರ ಗುತ್ತಿಗೆ ರದ್ದು
ಧಾರವಾಡದ ಕೆಎಂಎಫ್‌ನಿಂದ ಹಾಲಿನಪುಡಿ ಪೂರೈಸುತ್ತಿದ್ದ ಗುತ್ತಿಗೆದಾರ ಶಿವಕುಮಾರ ನಾಡಗೌಡ ದೇಸಾಯಿ ಹಾಗೂ ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ಪುಡಿ ಸರಬರಾಜು ಮಾಡುತ್ತಿದ್ದ ಡೊಂಬರಮತ್ತೂರಿನ ಬಸವರಡ್ಡಿ ಅವರ ಗುತ್ತಿಗೆ ರದ್ದುಗೊಳಿಸಲಾಗಿದೆ. ಸಂಸ್ಥೆಯಿಂದಲೇ ನೇರವಾಗಿ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಎರಡೂ ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net