

ಹಾವೇರಿ: ತಾಲೂಕಿನ ದೇವಿಹೊಸೂರಿನ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲದಲ್ಲಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ್ ಕುರಿತು ಜ.22ರಿಂದ24ರವರೆಗೆ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ನಾಗಜ್ಜನವರ ತಿಳಿಸಿದರು.
ಮಹಾವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫುಡ್ ಇಂಜಿನಿಯರಿಂಗ್, ಫುಡ್ ನ್ಯೂಟ್ರಿಶಿಯನ್, ಫುಡ್ ಪ್ಯಾಕೇಜಿಂಗ್, ಫುಡ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಸೇರಿ ವಿವಿಧ 10 ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಒಂದೊಂದು ಗೋಷ್ಠಿಗೆ ಒಬ್ಬೊಬ್ಬ ತಜ್ಞ ಸಂಪನ್ಮೂಲ ವ್ಯಕ್ತಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಮೊದಲ ದಿನ ಉದ್ಘಾಟನೆ ಸಮಾರಂಭ, ಐದು ಗೋಷ್ಠಿ, ಎರಡನೇ ದಿನ ಐದು ಗೋಷ್ಠಿ, ಮೂರನೇ ದಿನ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ, ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಸಮ್ಮೇಳನಕ್ಕೆ ಈಗಾಗಲೇ ರಾಜ್ಯ ಸೇರಿ, ವಿವಿಧ ರಾಜ್ಯಗಳ 280 ಸದಸ್ಯರು ನೋಂದಾಯಿಸಿದ್ದಾರೆ. ಬಿಹಾರ, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ವಿದೇಶಗಳಿಂದ 6 ಸದಸ್ಯರು ಆನ್‌ಲೈನ್ ಮೂಲಕ ಭಾಗವಹಿಸುತ್ತಾರೆ ಎಂದರು.
ಯುನೈಟೆಡ್ ಕಿಂಗ್‌ಡಮ್‌ನ ಮ್ಯಾಕ್‌ಗಿಲ್ ಯೂನಿವರ್ಸಿಟಿಯ ಪ್ರೊ.ಹೊಸಳ್ಳಿ ರಾಮಸ್ವಾಮಿ ಫುಡ್ ಇಂಜಿನಿಯರಿಂಗ್ ಆ್ಯಂಡ್ ರಿಯಾಲಜಿ ಕುರಿತು ಆನ್‌ಲೈನ್ ಮೂಲಕ ಉಪನ್ಯಾಸ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾವಿದ್ಯಾಲಯದ ಡಾ.ತಿಪ್ಪಣ್ಣ ಕೆ.ಎಸ್., ಡಾ.ಜಯಶ್ರೀ ಹುಗ್ಲಾಟ್, ಡಾ.ವೀಣಾ, ಡಾ.ಪವನ, ಬಸವರಾಜ ಮಲ್ಲಿಗವಾಡ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.
ಉದ್ಘಾಟನಾ ಸಮಾರಂಭಕ್ಕೆ ಡಾ.ರೋಹಿಣಿ ಸಿಂಧೂರಿ
ದೇವಿಹೊಸೂರ ಕಾಲೇಜ್ ಸಭಾಂಗಣದಲ್ಲಿ ಜ.22ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ಆಹಾರ ಸಂಸ್ಕರಣೆ ಹಾಗೂ ತಂತ್ರಜ್ಞಾನ ಇಲಾಖೆಯ ವಿಶೇಷ ಕಾರ್ಯದರ್ಶಿ ಡಾ.ರೋಹಿಣಿ ಸಿಂಧೂರಿ ಸಮಾವೇಶ ಉದ್ಘಾಟಿಸುವರು. ಬಾಗಲಕೋಟ ವಿವಿ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ ಸಮ್ಮೇಳನ ಅಧ್ಯಕ್ಷರಾಗಿ ಭಾಗವಹಿಸುವರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ, ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ, ಬಾಗಲಕೋಟ ವಿವಿ ಆಡಳಿತ ಮಂಡಳಿ ಸದಸ್ಯ ಡಾ.ಮಹಾಂತಗೌಡ, ಮಹಾವಿದ್ಯಾಲಯದ ಡೀನ್ ಡಾ.ಬಿ.ಫಕ್ರುದ್ದೀನ, ಇತರರು ಭಾಗವಹಿಸಲಿದ್ದಾರೆ.
ವಿಜ್ಞಾನಿಗಳು, ಆಹಾರ ತಜ್ಞರು ಭಾಗಿ
ಬಿಟೆಕ್, ಎಂಟೆಕ್, ಪಿಎಚ್‌ಡಿ ವಿದ್ಯಾರ್ಥಿಗಳು, ವಿಜ್ಞಾನಿಗಳು, ಆಹಾರ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಐಡಿಯಾಥಾನ್ ಗೋಷ್ಠಿಯಲ್ಲಿ ಹೊಸ ವಿಚಾರಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಡಾ.ಕಿರಣ ವಿವರಿಸಿದರು.