ತೋಟಗಾರಿಕಾ ಆಹಾರ ಉತ್ಪನ್ನಗಳಿಗೆ ಡಿಮಾಂಡ್; ಸಿರಿಧಾನ್ಯ ಉತ್ಪಾದನೆ ಹೆಚ್ಚಳ ಆಗಬೇಕು; ದೇವಿಹೊಸೂರ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ರೋಹಿಣಿ ಸಿಂಧೂರಿ ಸಲಹೆ

22 HVR 5 C
Published on

ಹಾವೇರಿ: ಆಹಾರ ಸಂಸ್ಕರಣೆಗಾಗಿ ಪ್ರತ್ಯೇಕ ಇಲಾಖೆ ಮಾಡುವುದಾಗಿ ಮುಖ್ಯಮಂತ್ರಿಯವರು ಈಗಾಗಲೇ ಘೋಷಿಸಿದ್ದಾರೆ. ದೇಶ, ವಿದೇಶಗಳಿಗೆ ತೋಟಗಾರಿಕಾ ಆಹಾರ ಉತ್ಪನ್ನಗಳ ರಫ್ತು ಮಾಡಲು ಡಿಮಾಂಡ್ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಆಹಾರ ತಯಾರಿಕಾ ಕ್ಷೇತ್ರದ ಎಲ್ಲ ವಿಭಾಗಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂದೂರಿ ಸಲಹೆ ನೀಡಿದರು.

ತಾಲೂಕಿನ ದೇವಿಹೊಸೂರು ಗ್ರಾಮದ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ’ ವಿಷಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತೋಟಗಾರಿಕಾ ವಿವಿಯ ವಿದ್ಯಾರ್ಥಿಗಳು, ಸಂಶೋಧಕರು ಹೊಸ ತಂತ್ರಜ್ಞಾನ, ಯೋಜನೆ ಪರಿಚಯಿಸಿದರೆ ಸರ್ಕಾರದ ಮಟ್ಟದಲ್ಲಿ ಯೋಜನೆ ಸಿದ್ಧಪಡಿಸಬೇಕು. ಈ ಸೆಕ್ಟರ್‌ಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದರೆ ಚೆನ್ನಾಗಿರುತ್ತದೆ ಎಂದರು.

ಐದಾರು ವರ್ಷಗಳಿಂದ ಸಿರಿಧಾನ್ಯಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಆದರೆ, ಸಿರಿಧಾನ್ಯಗಳ ಉತ್ಪಾದನೆ ಕಡಿಮೆಯಾದ ಕಾರಣ ದರ ಹೆಚ್ಚಾಗಿದೆ, ಅಕ್ಕಿ ದರ ಕಡಿಮೆಯಾಗಿದೆ. ಅದಕ್ಕಾಗಿ ಜನ ಅಕ್ಕಿಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ರೈತರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆದರೆ ರೈತರಿಗೂ, ಜನರ ಆರೋಗ್ಯಕ್ಕೂ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ಅಧ್ಯಯನಗಳು ಆಗಬೇಕಿದೆ ಎಂದರು.

ತೋಟಗಾರಿಕಾ ವಿವಿ ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ ಮಾತನಾಡಿ, ತೋಟಗಾರಿಕಾ ಬೆಳಗಳಲ್ಲಿ ಆಹಾರ, ಆರೋಗ್ಯ, ಆದಾಯ ಮೂರು ಲಾಭಗಳಿವೆ. ಇದನ್ನು ರೈತರು, ತೋಟಗಾರಿಕೆ ವಿದ್ಯಾರ್ಥಿಗಳು ಅರಿಯಬೇಕು. ಇತ್ತೀಚೆಗೆ ಎಲ್ಲೆಡೆ ಆಹಾರದ ಕೊರತೆ ಹೆಚ್ಚಾಗುತ್ತಿದೆ. ವಿಟಮಿನ್‌ಗಳ ಕೊರತೆಯಿಂದ ಶೇ.40ರಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಮಿನರಲ್ ಕೊರತೆಯಿಂದ ಬಳಲುತ್ತಿದ್ದಾರೆ. ಹಲವು ಜನ ಲಿವರ್ ತೊಂದರೆಗೆ ಒಳಗಾಗುತ್ತಿದ್ದಾರೆ ಇದಕ್ಕೆಲ್ಲ ಪರಿಹಾರ ನಮ್ಮ ಆಹಾರದಲ್ಲಿದೆ ಎಂದರು.

ತೋಟಗಾರಿಕಾ ಬೆಳೆಗಳು ಹೆಚ್ಚಾದರೆ ಅದೂ ಪರಿಸರಕ್ಕೆ ನೀಡುವ ಕೊಡುಗೆಯಾಗುತ್ತದೆ. ಮೆಣಸಿನಕಾಯಿ ಪೌಡರ್ ಕಾಸ್ಮೆಟಿಕ್‌ಗಳ ತಯಾರಿಕೆಗೆ ಬಳಸಲಾಗುತ್ತಿದೆ. ಹಲವರು ಅಕ್ಕಿ, ಗೋದಿ ಮೇಲೆ ಹೆಚ್ಚಿನ ಅವಲಂಬನೆ ಆಗಿದ್ದಾರೆ. ನವಣೆ, ಸಜ್ಜೆ, ಅರ್ಕದಂಥ ಇತರ ಆಹಾರ ಪದಾರ್ಥಗಳನ್ನು ಬಳಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ ಎಂದರು.

ವಿವಿಧ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ 280 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಬಾಗಲಕೋಟ ವಿವಿ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ, ಬಾಗಲಕೋಟ ವಿವಿ ಆಡಳಿತ ಮಂಡಳಿ ಸದಸ್ಯ ಡಾ.ಮಹಾಂತಗೌಡ, ಮಹಾವಿದ್ಯಾಲಯದ ಡೀನ್ ಡಾ.ಬಿ.ಫಕ್ರುದ್ದೀನ, ಡಾ.ಕಿರಣ ನಾಗಜ್ಜನವರ, ಡಾ.ತಿಪ್ಪಣ್ಣ ಕೆ.ಎಸ್., ಇತರರು ಉಪಸ್ಥಿತರಿದ್ದರು.

ಅಡಕೆ ಮಲೆನಾಡಿಗೆ ಸೂಕ್ತ

ಹಾವೇರಿ ಜಿಲ್ಲೆಯಲ್ಲೂ ಈಗೀಗ ಹೆಚ್ಚಿನ ರೈತರು ಅಡಕೆ ಬೆಳೆಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅಡಕೆ ಬೆಳೆ ಮಲೆನಾಡಿನ ವಾತಾವರಣಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ. ಮಲೆನಾಡಲ್ಲಿ ಬಂದಷ್ಟು ಇಳುವರಿ ಈ ಭಾಗದಲ್ಲಿ ಬರುವುದು ಕಷ್ಟಕರ. ಈ ನಿಟ್ಟಿನಲ್ಲಿ ರೈತರು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದು ಮುಂದುವರಿದರೆ ಸೂಕ್ತ ಎಂದು ರೋಹಿಣಿ ಸಿಂಧೂರಿ ಹೇಳಿದರು.

ಕೋಟ್:

ಇಂದಿನ ದಿನಗಳಲ್ಲಿ ಜ್ಞಾನದ ಜತೆಗೆ ಕೌಶಲ ಅತ್ಯಗತ್ಯವಾಗಿ ಬೇಕಾಗುತ್ತದೆ. ಮಾವು, ಹಲಸು, ದ್ರಾಕ್ಷಿ, ಇತರ ತೋಟಗಾರಿಕಾ ಬೆಳೆಗಳು ಆಯಾ ಸೀಸನ್‌ನಲ್ಲಿ ಮಾತ್ರ ಸಿಗುತ್ತವೆ. ಅವುಗಳನ್ನು ಬಳಸಿಕೊಂಡು ಸಂಸ್ಕರಿಸಿ ಇಡಬಹುದಾದ ಆಹಾರ ತಯಾರಿಸಿ ವರ್ಷವಿಡೀ ಸಿಗುವಂತೆ ಮಾಡಬೇಕು. ಇದರಿಂದ ರೈತರು, ಉತ್ಪಾದಕರು, ಮಾರಾಟಗಾರರು ಎಲ್ಲರಿಗೂ ಆದಾಯ ದೊರೆಯುತ್ತದೆ.

- ಡಾ.ಎಸ್.ಬಿ.ದಂಡಿನ, ತೋಟಗಾರಿಕಾ ವಿವಿ ವಿಶ್ರಾಂತ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net